ನಾವೀಗ ವರೆಂಜೊ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ.
ನೀವು ಬಾಯಾರಿದಾಗ ಪ್ರಪಂಚವೆಲ್ಲ ಬದಲಾಗುತ್ತದೆ. ಸಂಕುಚಿತಗೊಳ್ಳುತ್ತೆ. ಅದರ ಆಳ ತಿಳಿಯುವುದಿಲ್ಲ. ದಿಗಂತದ ಹತ್ತಿರ ಸೆಳೆಯುತ್ತದೆ. (ಉತ್ತರ ಇಥಿಯೋಪಿಯಾದಲ್ಲಿ ಭೂಮಿ ಮತ್ತು ಆಕಾಶ ಬೆಸೆದಂತಿರುತ್ತೆ. ನಿರ್ಜನ, ನೀರವತೆ ತಾಂಡವಾಡುತ್ತೆ) ಮರುಭೂಮಿ ಉಸಿರುಗಟ್ಟಿಸಲಿಕ್ಕೆ ಆರಂಭವಾಗುತ್ತೆ. ಬುದ್ದಿಗೆ ದಿಕ್ಕು ತೋಚದೆ ರಿಫ್ಟ್ ವ್ಯಾಲಿಯ ವಿಸ್ತಾರತೆಯ ಅಳತೆ ತಪ್ಪಿಸಿ, ಅಂತರ ಭೂತಾಕಾರವಾಗಿ ಕಾಡಿಸಲಿಕ್ಕೆ ಶುರುವಾಗುತ್ತದೆ, ಹೇಗಾದರೂ ನೀರಿನ ಸೆಲೆಯನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ಆಗ ಉಳಿದೆಲ್ಲವೂ ನಶ್ವರ.
ಅಹಮದ್ ಅಲೆಮಾ ಹೆಸನ್ ಮತ್ತು ನಾನು ಘನಘೋರ ಬಿಸಿಲಿನಲ್ಲಿ ಅತಿಪ್ರಯಾಸದಿಂದ 20 ಮೈಲಿ ನಡೆದಿದ್ದೆವು. ಹಾಗೆ ನಡೆಯುತ್ತಾ ನಮ್ಮ ಸರಕುಗಳನ್ನು ಸಾಗಿಸುತ್ತಿದ್ದ ಒಂಟೆಗಳನ್ನು ಮುಂದಿನ ಶಿಬಿರಕ್ಕೆ ಹೋಗಲು ಬಿಟ್ಟು ಸನಿಹದಲ್ಲಿದ್ದ ಪುರಾತತ್ವಶಾಸ್ತ್ರ ಪ್ರದೇಶದ ಕಡೆ ಹೆಜ್ಜೆ ಹಾಕಿದ್ದೆವು: ಗೋನಾ, ಅತ್ಯಂತ ಪುರಾತನ ಶಿಲಾಯುಗದ ಅಯುಧಗಳು ದೊರಕುತ್ತಿದ್ದ ಪ್ರದೇಶ. ನಮ್ಮ ನೀರಿನ ಸಂಗ್ರಹವೆಲ್ಲ ಖಾಲಿಯಾಗಿತ್ತು. ಬಾಯಾರಿಕೆಯಿಂದ ಬಳಲಿ, ಆತಂಕ ಆರಂಭವಾಯಿತು. ಮಾತನಾಡುವುದು ಕಡಿಮೆಯಾಯಿತು. (ಮಾತಾಡುವುದೇನಿದೆ? ಸುಮ್ಮನೆ ನಾಲಿಗೆ ಒಣಗಿಸಿಕೊಳ್ಳುವುದೇಕೆ?) ಸೂರ್ಯನ ಕಿರಣಗಳು ತಲೆಬುರುಡೆಗೆ ತಿರುಪುಮೊಳೆಯಂತೆ ನಾಟುತ್ತಿದ್ದವು. ಅಫಾರ್ ಪ್ರದೇಶದಲ್ಲಿ ಪ್ರಚಲಿತವಿದ್ದ ನಾಣ್ಣುಡಿಯಂತೆ: ಕಳೆದುಹೋದಾಗ ಅಥವಾ ಬಾಯಾರಿದಾಗ ಬಿಸಿಲಿನಲ್ಲಿ ನಡೆಯುವುದನ್ನು ನಿಲ್ಲಸಬಾರದು. ಏಕೆಂದರೆ, ಅಂತಿಮವಾಗಿಯಾದರೂ ಯಾರಾದರೊಬ್ಬರು ನಮ್ಮನ್ನು ನೋಡುವ ಸಂಭವವಿರುತ್ತದೆ. ನೆರಳನ್ನು ಆಶ್ರಯಿಸುವ ಆಸೆಯಿಂದ ಇಲ್ಲಿರುವ ಹತ್ತಾರು ಸಾವಿರ ಮುಳ್ಳಿನ ಪೊದೆಗಳ ಕೆಳಗೆ ವಿರಮಿಸುವ ದುಸ್ಸಾಹಸಕ್ಕೆ ಮಾತ್ರ ಪ್ರಯತ್ನಿಸಬಾರದು, ಮೃತ್ಯುವಿನ ಮಡಿಲಿನಲ್ಲಿ ಮಲಿಗಿದಂತೆ: ಯಾರೂ ನಮ್ಮನ್ನು ಹುಡುಕಲಾರರು. ನಾವು ಆ ಕಣ್ಣು ಕುಕ್ಕುವ ಬಿಸಿಲಿನಲ್ಲೇ ತತ್ತರಿಸುತ್ತಾ ನಡೆಯುತ್ತಿದ್ದೆವು - ಕೊನೆಗೂ ಮೇಕೆಗಳು ಅರಚುವ ಶಬ್ಧ ಕ್ಷೀಣವಾಗಿ ಕೇಳಿಸಿತು. ಇಬ್ಬರ ಮುಖದಲ್ಲೂ ಮುಗುಳ್ನಗೆ ಮಿಂಚಿತು. ಸ್ವಲ್ಪ ನಿರಾತಂಕವಾಯಿತು. ಮೇಕೆಗಳು ಎಂದರೆ ಮನುಷ್ಯರು.
ನಮ್ಮ ಅತಿಥೇಯರು: ಗುಡ್ಡದ ಮೇಲೆ ಶಿಬಿರ ಹೂಡಿದ್ದ ಒಂದು ಅಫಾರ್ ಕುಟುಂಬ. ಸದೃಡವಾಗಿ ಮಂದಹಾಸ ಬೀರುತ್ತಿದ್ದ ಇಬ್ಬರು ಯುವತಿಯರು. ಹಿಂದೆಂದೂ ಒಂದು ದಿನ ಬಟ್ಟೆಯಾಗಿದ್ದು ಇಂದು ಹರಿದು ಚಿಂದಿಯಾಗಿದ್ದನ್ನು ತೊಟ್ಟಿದ್ದ ಎಂಟು ಮಕ್ಕಳು. ಇನ್ನೊಂದು ಮುದುಕಿ - ಬಹುಶಃ ಆಕೆಯ ವಯಸ್ಸು ಆಕೆಗೆ ತಿಳಿದಿರಲಿಲ್ಲವೇನೋ - ಯಾವುದೋ ಜೊಂಡಿನ ಚಾಪೆಯ ನೆರಳಿನಡಿಯಲ್ಲಿ ಕುಳಿತಿದ್ದ ಗೂನುಬೆನ್ನಿನ ಕುಬ್ಜ ಹೆಂಗಸು. ಆಕೆಯ ಹೆಸರು ಹಸ್ನಾ. ಜೇಡರಹುಳುವಿನ ಕಾಲುಗಳಂತಿದ್ದ ಬೆರಳಿನಲ್ಲಿ ಏನನ್ನೊ ಹೆಣೆಯುತ್ತಿದ್ದಳು, ಅನಾದಿಕಾಲದಿಂದೆಂಬಂತೆ. ನಮ್ಮನ್ನು ಕರೆದು ಕುಳಿತುಕೊಳ್ಳಲು ಹೇಳಿ, ಶೂಗಳನ್ನು ಕಳಚಿದನಂತರ, ಜರ್ಜರಿತಗೊಂಡಿದ್ದ ಡಬ್ಬದಿಂದ ನಮಗೊಂದಿಷ್ಟು ನೀರನ್ನು ದಯಪಾಲಿಸಿದಳು. ಸುಣ್ಣದ ನೀರಿನಂತೆ ಬೆಚ್ಚಗಿದ್ದ, ಉಪ್ಪುಪ್ಪಾದ, ಕ್ಷಾರಯುಕ್ತವಾದುದನ್ನು ಕುಡಿಯುವಾಗ ಗಂಟಲಿನಲ್ಲಿ ಕಾದೆಣ್ಣೆ ಇಳಿದಂತಾಯಿತು. ಆದಾಗ್ಯೂ ಅಮೂಲ್ಯವಾದದ್ದು. ಒಂದು ಮುಷ್ಟಿಯಷ್ಟು ಕಾಡಿನ ಮರದ ಹಳದಿ ಹಣ್ಣುಗಳನ್ನು ತಿನ್ನಲುಕೊಟ್ಟಳು. ಅವಳೆ ನಮ್ಮ ಮಾತೃಸ್ವರೂಪಿ.
ಸುಮಾರು 60,000 ವರ್ಷಗಳ ಹಿಂದೆ ನಮ್ಮ ಪೂರ್ವಜರು ಆಫ್ರಿಕಾದಿಂದ ಚದುರಿದಾಗ ಹೋಮಿನಿಡ್ ಜೀವಜಾತಿಯ ಬೇರೊಂದು ಸಂಕುಲವನ್ನು ಎದುರಿಸಿರಬಹುದು. ಅಂದಿನ ಪ್ರಪಂಚ ಅಪರಿಚಿತ ಸೋದರ ಸಂಬಂಧಿಗಳಿಂದ ಕಿಕ್ಕಿರಿದಿದ್ದಿರಬಹುದು: ಹೋಮೊ ನಿಯಾಂಡರ್ತಲೆನ್ಸಿಸ್ (Homo neanderthalensis), ಹೋಮೊ ಡೆನಿಸೂವನ್ಸ್ (Homo denisovans), ಹೋಮೊ ಪ್ಲೋರೆಸಿಯೆನ್ಸಿಸ್ (Homo floresiensis), ಅಥವಾ ಮಾನವ ಸಂಕುಲಕ್ಕೆ ಸೇರಿಲ್ಲದಿದ್ದಿರಬಹುದಾದ ಮಾನವರು ಇದ್ದಿರಬಹುದು.
ಹೇಗೆ ಬದುಕಿದ್ದಿರಬಹುದು? ಹೇಗೆ ಪ್ರೇಮಿಸಿರಬಹುದು? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ.
ನಾವು ಅವರನ್ನು ಭೇಟಿಯಾದಾಗ, ಇಂಥದೆ ಪರಿಸ್ಥಿತಿಗಳಲ್ಲಿ, ಬಹುಶಃ ಇಂಥದೆ ಯಾವುದಾದರು ಬೆಟ್ಟದ ತುದಿಯ ಮೇಲಿದ್ದಿರಬಹುದು, ಹೀಗೆ ನೀರನ್ನು ಹಂಚಿಕೊಂಡಿರಬಹುದೆ? ಅಥವಾ ತಳಿವಿಜ್ಞಾನಿಗಳು ಹೇಳುವಂತೆ ಶಾಂತಿಯುತವಾಗಿ ಸಂಕರಗೊಂಡು, ತಳಿ ವೃದ್ಧಿಸಿರಬಹುದೆ? (ಆಫ್ರಿಕಾದಿಂದಾಚೆಗಿನ ಆಧುನಿಕ ಮಾನವರಲ್ಲಿ ಪ್ರತಿಶತ 2ರಷ್ಟು ನಿಯಾಂಡರ್ಥಾಲ್ ಡಿ.ಎನ್.ಎ. ಇದೆ) ಅಥವಾ ಅವರನ್ನು ಬಲಾತ್ಕರಿಸಿ ಕೊಂದಿರಬಹುದೆ? ಇದೆ ಜನಾಂಗ ಹತ್ಯೆಯ ಬುನಾದಿಯಾಗಿರಬಹುದೆ? (ಫರ್ನಾಂಡೊ ರೊಜ್ಜಿ (Fernando Rozzi) ಎಂಬ ಪ್ಯಾರಿಸ್ ಸೆಂಟರ್ ನಾಷನಲ್ ಡಿ. ಲಾ. ರಿಸರ್ಚ್ ಸೈಂಟಿಫಿಕ್ ನ ವಿಜ್ಞಾನಿ, ಆಧುನಿಕ ಮಾನವರಿದ್ದ ಗುಹೆಯೊಂದರಲ್ಲಿ, ಕತ್ತರಿಸಿ ವಿಕಲಗೊಂಡಿದ್ದ ಗುರುತುಗಳುಳ್ಳ ನಿಯಾಂಡರ್ಥಾಲ್ ಮಾನವನ ದವಡೆ ಮೂಳೆಯನ್ನು ಪತ್ತೆ ಹಚ್ಚಿದ್ದ. ಬಹುಶಃ ನರಭಕ್ಷಣೆ.) ವಿಜ್ಞಾನಿಗಳಿಗೆ ಇಂದಿಗೂ ಈ ವಿಷಯದ ಮೇಲೆ ಒಮ್ಮತವಿಲ್ಲ. ಒಂದಂತೂ ನಿಜ: ಈ ಭೂಮಿಯನ್ನು ಜಯಿಸಿದ ಮಾನವರೆಂದರೆ ನಾವೆ. ಈ ಭೂಮಿಯ ಹಕ್ಕುದಾರರು ನಾವೆ. ಆದರೆ ಅದಕ್ಕೆ ತೆರಬೇಕಾದ ಬೆಲೆ: ನಮ್ಮ ಹತ್ತಿರದ ಸಂಬಂಧಿಗಳ ಅವನತಿ. ನಾವೀಗ ಏಕಾಂಗಿ ಮಂಗಮಾನವ.
ಹಸ್ನಳ ಪ್ರಶಾಂತ ಧ್ವನಿ ನನ್ನ ನಿದ್ದೆಗೆ ಲಾಲಿ ಹಾಡಿತು.
ನಾ ಎಚ್ಚರಗೊಂಡಾಗ, ಅಲೆಮಾರಿ ಶಿಬಿರದ ಮನುಷ್ಯನೊಡನೆ ಅಲೆಮಾ ಕೆಳಧ್ವನಿಯಲ್ಲಿ ಹರಟೆ ಹೊಡೆಯುತ್ತಿದ್ದ. ಶಿಬಿರದವರು ಹಿಂಡನ್ನು ಮೇಯಿಸಿಕೊಂಡು ಹಿಂದಿರುಗಿದ್ದರು. ಮುಗುಳ್ನಗುತ್ತಿದ್ದ ಹಸ್ನಳಿಗೆ ನಮ್ಮಲ್ಲಿದ್ದ ತಿಂಡಿ ಪೊಟ್ಟಣಗಳನ್ನು ಕೊಟ್ಟು, ಎಲ್ಲರಿಗೂ ಧನ್ಯವಾದ ಹೇಳಿ, ಕೈಕುಲುಕಿ, ನಡೆಯಲಿಕ್ಕೆ ಶುರುಮಾಡಿದೆವು. ವರೆಂಜೊ ಕಡೆಗೆ ನಡೆಯುತ್ತಿದ್ದ ಒಂಟೆಗಳನ್ನು ಸೇರಿಕೊಳ್ಳಲು ದಾಪುಗಾಲು ಹಾಕಿದೆವು. ಅಂದು ರಾತ್ರಿ ಗಾಳಿಗೆ ತೂಗಾಡುತ್ತಿದ್ದ ಶಿಬಿರದ ಬೆಂಕಿಯ ಮುಂದೆ ಕುಳಿತು ನಮಗೆ ಬಹುಮಾನವಾಗಿ ಕೊಟ್ಟ ಉಪ್ಪು ನೀರನ್ನು ಗುಟುಕರಿಸುತ್ತಿರುವಾಗ, ಅಲೆಮಾ ಹೇಳಿದ - ಹಸ್ನ ಶಿಬಿರದ ಗಂಡಸರು ಶಿಬಿರಕ್ಕೆ ಹಿಂತಿರುಗಿದಾಗ ಅಲೆಮಾ ಅವರ ಬುಡಕಟ್ಟಿನವನಲ್ಲದಿರುವುದರಿಂದ ಇವನಿಗೆ ಧಮಕಿಹಾಕಿದರಂತೆ, ಇವನೂ ಕೈಯಲ್ಲಿದ್ದ ಕೋಲಿನಿಂದ ಅವರ ಬುರುಡೆಗೆ ಹೊಡೆಯಲಿದ್ದೆನೆಂದು.
