"ಮನುಷ್ಯ ಅನಿಶ್ಚಿತತೆಯಲ್ಲಿ, ಮನಸ್ಸಿನ ಮೂಲೆಯಲ್ಲಿರುವುದನ್ನು ತಿಳಿದುಕೊಳ್ಳಬೇಕೆಂದು ಸ್ವಲ್ಪವಾದರೂ ಮನಸ್ಸು ಹೇಳುತ್ತೆ. ಆತ ತನ್ನ ಹೃದಯದಲ್ಲಿರುವುದನ್ನು ತಿಳಿದು ಕೊಳ್ಳಬಹುದು,ಆದರೆ ಆತನಿಗೆ ಅದು ಬೇಡವಾಗಿರುತ್ತೆ. ಅದು ನಿಜವೇ, ಇಣುಕಿ ನೋಡುವುದು ಸೂಕ್ತವಲ್ಲ." - ಕಾರ್ಮಾಕ್ ಮೆಕಾರ್ಥಿ.
“ನಿನ್ನ ಹೃದಯ ಗಟ್ಟಿ ಮಾಡಿಕೊ,” ನಾವಿಕ ಹೇಳಿದ.
ಒಂದು ಫುಟ್ಬಾಲ್ ಮೈದಾನದಷ್ಟು ವಿಸ್ತಾರವಿದ್ದ ಸಣ್ಣ ಹಡಗಿನಲ್ಲಿ ಅರೇಬಿಯಾಗೆ ತೇಲುತ್ತಿದ್ದೆವು.
ನಮ್ಮ ಹಡಗು ಕಡಿಮೆಯೆಂದರೂ 9000 ಆತ್ಮಗಳಿಂದ ತುಂಬಿತ್ತು - 8,000 ಕುರಿಗಳು, 855 ಒಂಟೆಗಳು ಮತ್ತು 24 ಮಾನವ ಜೀವಿಗಳು.(ಅವರಲ್ಲಿ 20 ಮಂದಿ ಹಡಗಿನ ಸಿಬ್ಬಂದಿಗಳು, 3 ಪಶುವೈದ್ಯರು, ಒಬ್ಬ ಪ್ರಯಾಣಿಕ.) ಆ ನಾವಿಕ ಎದೆ ಗುಂದಿದ್ದ, ಲಜ್ಜಿತನಾಗಿದ್ದ, ಮುಜುಗರಕ್ಕೊಳಗಾದವನಂತೆ ಕಾಣುತ್ತಿದ್ದ. ಅವನ ಕೆಲಸದ ಅರಿವಿನ ಬಗ್ಗೆ ಗೊಂದಲದಲ್ಲಿದ್ದ. ಅವನ ಹಡಗಿನಲ್ಲಿದ್ದದ್ದು ವಿನೀತ ಮಾರಾಟದ ಸರಕುಗಳು : ಜೀವಂತ ಪ್ರಾಣಿಗಳು ಕೆಂಪು ಸಮುದ್ರದ ಬಸವಳಿಯುವಂತ ಯಾನವನ್ನು ತಡೆದುಕೊಳ್ಳಬೇಕಾಗಿತ್ತು. ಹಡಗಿನ ಮೇಲಿನ ಅಟ್ಟದ ಕಬ್ಬಿಣದ ದೊಡ್ಡಿಯಲ್ಲಿದ್ದ ಕುರಿಗಳು ಅರಚುತ್ತಿದ್ದವು. ಹಡಗಿನ ಕೆಳಗಿನ ಅಟ್ಟದ ಅರೆಗತ್ತಲಿನಲ್ಲಿ ತಡವರಿಸುತ್ತಿದ್ದ ಒಂಟೆಗಳ ಕೊರಳುಗಳು ತೂಗಾಡುತ್ತಿದ್ದುದು ಕಾಡಿನಲ್ಲಿರುವ ಮರಗಳು ಗಾಳಿಗೆ ಓಲಾಡುವುದನ್ನು ನೆನಪಿಗೆ ತರುತ್ತಿತ್ತು. ನಮ್ಮದೇನು ನೋವಾ ಆರ್ಕ್ ಅಲ್ಲ. ಮಧ್ಯಪ್ರಾಚ್ಯಕ್ಕೆ ಈ ಪ್ರಾಣಿಗಳನ್ನು ಕೊಂಡೊಯ್ಯುತ್ತಿದ್ದುದು ಕಡಿಯಲು. ಈ ಸೂಕ್ಷ್ಮಮತಿ ನಾವಿಕ ತುಂಬಾ ಪ್ರತಿಭಟಿಸುತ್ತಿದ್ದ. ಆತ ಯುವಕ. ನಾವು ಆರಂಭದಿಂದಲೇ ಹೃದಯವನ್ನು ಗಟ್ಟಿಮಾಡಿಕೊಂಡಿದ್ದೆವೆಂದು ಅವನಿಗೆ ಅರ್ಥವಾಗಿರಲೇ ಇಲ್ಲ - ಬಹುಶಃ 60000 ವರ್ಷಗಳ ಹಿಂದೆ ಆಫ್ರಿಕಾ ಬಿಟ್ಟು ಹೊರಟ ಮಂದಿ ಆಹಾರವನ್ನು ಹುಡುಕುತ್ತಾ, ದಾರಿಯಲ್ಲಿ ಸಿಕ್ಕಿದ್ದನ್ನು ತಿನ್ನುತ್ತಾ ಪ್ರಪಂಚ ಪರ್ಯಟಿಸಿದವರು. ಅವರು ಸೇವಿಸಿದ್ದ ಆಹಾರ ಈಗಿಲ್ಲ. ನಾವೀಗ ನಮ್ಮ ಆಹಾರವನ್ನು ನಮ್ಮ ಜೊತೆಯಲ್ಲೇ ಕೊಂಡೊಯ್ಯುತ್ತಿದ್ದೇವೆ.
ಮೋಟಾರ್ ದೋಣಿ ಅಬುಯಾಸೆರ್ II : ಆಫ್ರಿಕಾದಿಂದ ಹೊರಹೋಗಲಿಕ್ಕಿರುವ ನನ್ನ ರಹದಾರಿ.
Paul Salopek
ಸ್ವತಂತ್ರ ಪಟ್ಟಣವಾದ ಸಿಯೆರ್ರಾ ಲಿಯೋನ್ ಬಾವುಟವಿದ್ದ, 1978ರಲ್ಲಿ ಇಟಲಿಯಲ್ಲಿ ಕಟ್ಟಿದ್ದು. (ಈ ಹಡಗಿನ ಇಂಜಿನ್ ರೂಮಿನ ನಿಯಂತ್ರಣಗಳಲ್ಲೆಲ್ಲಾ ಒಪೆರಾ ನಾಟಕದ ಹೆಸರುಗಳಂತಿದ್ದವು: ಅಡಾಜಿಯೋ, ಮೆಜ್ಙಾ, ಟುಟ್ಟೊ, ಫಿನಿಟೊ.) ಮೂಲತಃ ಇದು ವಾಹನಗಳನ್ನು ಸಾಗಿಸುವ ಹಡಗು. ಜಿಬೂತಿಯಲ್ಲಿ ಈ ಹಡಗಿನ ಮೇಲಿನ ಅಟ್ಟಕ್ಕೆ ಮಧ್ಯರಾತ್ರಿಯ ಬಂದರಿನ ಕಿತ್ತಳೆ ಬಣ್ಣದ ಬೆಳಕಿನಲ್ಲಿ ಹಡಗಿನ ಹಮಾಲಿಗಳು ಕುರಿಗಳನ್ನು ತುಂಬಿದ್ದರು. (ಹಡಗಿನ ಕಬ್ಬಿಣದ ನೆಲದಮೇಲೆ ಒಂಟೆಗಳ ಶಬ್ಧರಹಿತ ನಡಿಗೆ ಭ್ರಮಾ ಲೋಕದಲ್ಲಿ ಸಂಚರಿಸಿದಂತೆ ಭಾಸವಾಗುತ್ತಿತ್ತು.) ಸೌದಿ ಅರೇಬಿಯಾದ ಜೆಡ್ಡಾಗೆ ತೇಲುವ ಈ ಹಡಗಿನಲ್ಲಿ ಇನ್ನೂ ಮೂರುದಿವಸ ಪ್ರಯಾಣಿಸಬೇಕಿತ್ತು. ನಮ್ಮದೊಂದು ತೇಲುವ ಕೊಟ್ಟಿಗೆಯಂತೆ, ನಮ್ಮ ಚಲಿಸುವ ಹಡಗಿನ ಹಿಂಬದಿಯ ಜಾಡಿನಲ್ಲಿ ಒಂದಷ್ಟು ಹುಲ್ಲು ಕಡ್ಡಿಗಳು ಹಾರುತ್ತಿದ್ದವು. ಹಡಗಿನ ಅಧಿಕಾರಿಗಳೆಲ್ಲಾ ಸಿರಿಯನ್ನರು. ನಮ್ಮ ಮರುಕದ ಸರಕು ಹೆಚ್ಚಾಗಲು ಇದೇ ಕಾರಣ.
“ಇವರೇಕೆ ಮಕ್ಕಳನ್ನು ಕೊಲ್ಲುತ್ತಿದ್ದಾರೆ?" ಹಡಗಿನ ಕಪ್ತಾನ ಅಬ್ದುಲ್ಲಾ ಅಲಿ ನೆಜೆಮ್ ಉದ್ಗಾರವೆತ್ತಿದ. "ಗಂಡಸರನ್ನೇಕೆ ಕೊಲ್ಲುತ್ತಿದ್ದಾರೆ? ಹೆಂಗಸರನ್ನೇಕೆ ಕೊಲ್ಲುತ್ತಿದ್ದಾರೆ? ಯಾಕೆ? ಕಾರ್ಖಾನೆಗಳೆಲ್ಲಾ? 'ನಾಶವಾದವು! ರಸ್ತೆಗಳೆಲ್ಲಾ? 'ನಾಶವಾದವು! ಆಸ್ಪತ್ರೆಗಳು? 'ನಾಶವಾದವು! ಶಾಲೆಗಳು? 'ನಾಶವಾದವು! ನನ್ನ ದೇಶ? 'ನಾಶವಾಯಿತು! ಎಲ್ಲವೂ 'ನಾಶವಾಯಿತು! ಸಿರಿಯ - ಮುಗಿಯಿತು!. ಮುಗಿಯಿತು!"
ನೆಜೆಮ್ನ ಮನಸ್ಸಿನಲ್ಲಿ ಅಚ್ಚೊತ್ತಂತಿದ್ದ ತನ್ನ ತಾಯ್ನಾಡಿನ ಸುಂದರ ದೃಶ್ಯಗಳನ್ನೆಲ್ಲಾ ಯುದ್ಧ, ಸಣ್ಣ ಕುರುಹೂ ಇಲ್ಲದಂತೆ ಅಳಿಸಿಹಾಕಿದೆ, ಈ ನಾವಿಕರ ಸ್ವತ್ತೇನೂ ಈ ದೇಶದಲ್ಲಿ ಉಳಿದಿಲ್ಲ. ಸೇತುವೆಯ ಮೇಲೆ ಈತ ಕುಳಿತಿದ್ದ ರೀತಿ ಯೋಗಿಯಂತಿತ್ತು, ವಯಸ್ಸಾದ ಫಿನಿಶಿಯನ್ ವರ್ತಕರ ಕೊನೆಯ ಕೊಂಡಿಯಂತೆ ಕಾಣುತ್ತಿದ್ದ. ಕೈಯಲ್ಲಿದ್ದ ಸಣ್ಣ ಚಾಕುವಿನಲ್ಲಿ ಕಿತ್ತಳೆ ಹಣ್ಣನ್ನು ಸುಲಿಯುತ್ತಿದ್ದ. ಈತ ಸ್ನೇಹಜೀವಿ ಮತ್ತು ಸಮರ್ಥ ಮನುಷ್ಯ. ಅವನು ಹೇಳಿದ್ದನ್ನೇ ಮೂರು ಸಾರಿ ಪುನರಾವರ್ತಿಸುವಾಗ ಅವನ ಅಭಿಪ್ರಾಯವನ್ನೇನೂ ವ್ಯಕ್ತಪಡಿಸುತ್ತಿರಲಿಲ್ಲ. ಇಲ್ಲ : ಆದರೆ ಅದು ಲೋಕದ ಕಟ್ಟಳೆಯನ್ನು ವ್ಯಾಖ್ಯಾನಿಸಿದಂತಿತ್ತು. ಕಪ್ತಾನ ಅಬ್ದುಲ್ಲಾ ಬಹಳ ಸಲ ಪುನರಾವರ್ತಿಸುತ್ತಿದ್ದ ಕಾರಣ ಈ ಲೋಕದಲ್ಲಿರುವ ಅಷ್ಟೋಂದು ಕಟ್ಟಳೆಗಳು. (ಈ ಜಗತ್ತೊಂದು ಅತ್ಯಂತ ಸಂಕೀರ್ಣ ಪ್ರದೇಶ.) ತಾಂತ್ರಿಕತೆಯ ಅದೃಶ್ಯ ಸೆಳೆತಕ್ಕೆ ಒಳಗಾಗಿದ್ದ ಈ ಕಟ್ಟಳೆಯ ವ್ಯಾಖ್ಯಾನ :
“ಪ್ರತಿಯೊಂದು ಎಲೆಕ್ಟ್ರಾನಿಕ್! ಪ್ರತಿಯೊಂದು ಎಲೆಕ್ಟ್ರಾನಿಕ್! ಪ್ರತಿ- ಒಂದೊಂದೂ ಎಲೆಕ್ಟ್ರಾನಿಕ್! ಕೈಯಿಂದ! ಕೈನಲ್ಲಿ ಮಾಡು! ಕೈನಲ್ಲಿ ಮಾಡು! ಎಂದಿಗೂ ಉತ್ತಮ! ಎಂದಿಗೂ ಉತ್ತಮ! ಎಂದಿಗೂ ಉತ್ತಮ!"
ನೆಜೆಮ್ ನನಗೆ ಆತನ ಹಳೆಯಕಾಲದ ಒಂದು ಷಷ್ಟಕವನ್ನು ತೋರಿಸಿದ. ಚಿನ್ನದ ಗಟ್ಟಿಯಂತೆ ಹೊಳೆಯುತ್ತಿದ್ದ ಅದನ್ನು ಒಂದು ತೇಗದ ಮರದ ಆಭರಣ ಪೆಟ್ಟಿಗೆಯೊಳಗೆ ಹಸಿರು ಉಲ್ಲನ್ ಬಟ್ಟೆಯಲ್ಲಿ ಸುತ್ತಿಟ್ಟಿದ್ದ. ಈ ಸುಂದರ ಯಾಂತ್ರಿಕ ಉಪಕರಣವನ್ನು ಉಪಯೋಗಿಸಿಕೊಂಡು ನೌಕೆಯೊಂದರಲ್ಲಿ ಭಾರತದವರೆಗೆ ಹೋಗಿ ಹಿಂತಿರುಗಿದ್ದನಂತೆ. ಆದರೆ ಆ ದಿನ ರಾತ್ರಿ, ಸೇತುವೆಯನ್ನು ಹತ್ತಿ ಹಡಗಿನ ಯಾಂತ್ರಿಕ ಕೊಠಡಿಯೊಳಗೆ ನೋಡಿದಾಗ ಅಲ್ಲೊಂದು ಹೊಳೆಯುತ್ತಿದ್ದ ಐ ಫೋನ್ ಇತ್ತು. ಇತ್ತೀಚೆಗೆ ನೆಜೆಮ್ ಫೋನ್ ನಲ್ಲಿನ ಜಿ.ಪಿ.ಎಸ್.ನ ಆಪ್ ಅನ್ನು ಉತ್ತರದ ಅಲೆಗಳನ್ನೇರಿ ಹೋಗಲು ಉಪಯೋಗಿಸಿಕೊಳ್ಳುತ್ತಿದ್ದ. ಆತನ ಮುಖ ಐ ಫೋನ್ನ ಮಂದ ನೀಲಿ ಬೆಳಕಿನಲ್ಲಿ ದುಖಃ ಭರಿತವಾಗಿರುವುದನ್ನು ಗಮನಿಸಿದೆ.
ಅಬುಯಾಸೆರ್ II ಹಡಗಿನ ಮೇಲೆ ಅನ್ಯಮನಸ್ಕತೆ ಮತ್ತು ಪಲಾಯನವಾದವು ತುಂಬಿತ್ತು. ಹಡಗಿನ ಮುಖ್ಯ ಇಂಜಿನಿಯರ್ ತನ್ನ ಲ್ಯಾಪ್ ಟಾಪ್ ಮುಂದೆ ಗಂಟೆ ಗಟ್ಟಲೆ ಕುಳಿತಿರುತ್ತಿದ್ದ, ಧೂಮಪಾನ ಮಾಡುತ್ತಲೋ, ಕಣ್ಣು ಮುಚ್ಚಿ ಕುಳಿತು, ಅಂತರ್ಜಾಲದಿಂದ ಕೇಳಿಬರುತ್ತಿದ್ದ ಹಕ್ಕಿಗಳ ಕಂಠಸಿರಿಯನ್ನು ಆಲಿಸುತ್ತಿದ್ದ. ಇನ್ನೊಬ್ಬ ಮೊದಲನೇ ಅಧಿಕಾರಿ ಹಡಗಿನ ತುದಿಯಲ್ಲಿ ನಿಂತು, ಟೀ ಕುಡಿಯುತ್ತಾ, ನಿರ್ಭಾವ ಕಂಗಳಲ್ಲಿ ನೀಲಿ ದಿಗಂತವನ್ನು ದೃಷ್ಟಿಸುತ್ತಾ ನಿಂತಿರುತ್ತಿದ್ದ.
Paul Salopek
ಹಾತೊರೆಯುವಿಕೆಯ ಮನೋಭಾವ ಅಂಟುರೋಗದಂತೆ. ಹಡಗಿನ ತುದಿಯಲ್ಲಿ ನಿಂತು ಹಿಂದೆ ನೋಡುತ್ತಾ ಆಫ್ರಿಕಾ ಜಾರಿಹೋಗುತ್ತಿದ್ದುದನ್ನು ಆಗಾಗ ನೋಡುತ್ತಿದ್ದೆ. ಒಮ್ಮೊಮ್ಮೆ ಬೆಳ್ಳಿಗೆರೆಯಂತೆ, ಒಮ್ಮೊಮ್ಮೆ ಬಿಳಿ ಫಲಕದ ಅಂಚಿನಂತೆ, ಸಮುದ್ರದ ನಾಲಗೆಯ ಮೇಲಿಂದ ಕರಗಿ ಹೋಗುತ್ತಿದ್ದ ತೆಳುವಾದ ತಿಂಡಿಯಂತೆ. ಊಟದ ಮನೆಯಲ್ಲಿ ಕುಳಿತು ಒಂದೊಂದು ಆಲೀವ್ ಹಣ್ಣನ್ನು ತಿಂದಂತೆ, ಅರೇಬಿಯಾಗೆ ಹತ್ತಿರವಾಗುತ್ತಿದ್ದೆವು. ನಾನು ಉಳಿದುಕೊಂಡಿದ್ದ ಕೋಣೆಯ ದುಂಡು ಕಿಟಗಿಯಿಂದ ಹಡಗಿನ ಹಿಂಭಾಗ ಕಾಣುತ್ತಿತ್ತು. ಆ ಪುಟ್ಟ ಕೊಠಡಿ ಆಶ್ಚರ್ಯಕರವಾಗಿತ್ತು. ಹಡಗಿನಲ್ಲಿ ಪ್ರಯಾಣ ಮಾಡುವಷ್ಟು ದಿನವೂ ಆ ಅಧಿಕಾರಿ ತನ್ನ ಕೋಣೆಯನ್ನು ನನಗೆ ಬಿಟ್ಟುಕೊಟ್ಟಿದ್ದ. ಕ್ರಿಸ್ಮಸ್ ಮರಕ್ಕೆ ನೇತು ಹಾಕುವ ಕೆಂಪು ಬಲ್ಬ್ ಗಳಿಂದ ಅಲಂಕರಿಸಲಾಗಿತ್ತು. ಅವುಗಳನ್ನು ಛಾವಣಿಗೆ ನೇತು ಹಾಕಲಾಗಿತ್ತು. ಪ್ರೀತಿ ಸೂಚಕ ಹೃದಯಾಕಾರದ ಮೆತ್ತನೆಯೊಂದು ಮಲಗುವ ಹಾಸಿಗೆಯ ಮೇಲೆ ತೂಗಾಡುತ್ತಿತ್ತು. ಇದು ಹೋಟೆಲ್ ರೂಮಿನ ಅಲಂಕಾರದಂತಿತ್ತು. ಹಾಗಿದ್ದರೂ ಈ ಒಂಟೆಯ ಹಡಗಿನಲ್ಲಿ ಸ್ವಲ್ಪವೇ ಪ್ರೀತಿ ತುಂಬಿತ್ತು. ಆತ್ಮ-ಪ್ರೀತಿಯನ್ನು ಬಿಟ್ಟು.
Paul Salopek
ಆಫ್ರಿಕಾ ಹಾಗೂ ಅರೇಬಿಯಾದ ನಡುವೆ ಇರುವ ಬಾಬ್-ಎಲ್-ಮಾನ್ಡೆಬ್ ಎಂಬ ಕಿರಿದಾದ ಕೊಲ್ಲಿಯನ್ನು ಎಂದೋ ದಾಟಿದ್ದೆವು. ಹಡಗಿನ ಹಿಂದಿದ್ದ ನೀರಿನ ಜಾಡಿನಲ್ಲಿ ಹುಲ್ಲಿನ ಕಡ್ಡಿಯೊಂದು ಹಾರುವುದನ್ನು ದೃಷ್ಟಿಸುತ್ತಾ ನಿಂತಿದ್ದೆ. ಕೆಂಪು ಸಮುದ್ರದ ಬಾಟಲಿನ ಕುತ್ತಿಗೆಯಾಕಾರದ ಈ ಕೊಲ್ಲಿಯ ಇನ್ನೊಂದು ಹೆಸರು ಕಣ್ಣೀರಿನ ಕೊಲ್ಲಿ.
“ಕೆಂಪು ಸಮುದ್ರ” - ಕಪ್ತಾನ ಅಬ್ದುಲ್ಲಾ ಘೋಷಿಸಿದ - “ಮೆಡಿಟರೇನಿಯನ್ ಸಮುದ್ರಕ್ಕಿಂತ ಉಪ್ಪುಪ್ಪು”.
ಸಹಜವೇ. ಸಹಜವೇ. ಸಹಜವೇ.
