"ಕಾರು ಒಂದರ್ಥದಲ್ಲಿ ಕೃತಕ ಅಂಗಾಂಗದಂತೆ, ಕೃತಕ ಅಂಗಾಂಗಗಳು ಗಾಯಗೊಂಡ ಅಥವಾ ದೇಹದ ಭಾಗವೇ ಇಲ್ಲದವರಿಗಾದರೂ, ಕಾರು ಎಂಬ ಕೃತಕಾಂಗ, ದುರ್ಬಲವೆಂದು ಪರಿಕಲ್ಪಿಸಿಕೊಂಡ ದೇಹಕ್ಕೆ ಅಥವಾ ಮಾನವ ತನ್ನನ್ನು ಮೀರಿ ಸೃಷ್ಟಿಸಿದ ಕೃತಕ ಪ್ರಪಂಚದಿಂದ ದುರ್ಬಲಗೊಂಡ ದೇಹಗಳಿಗೆ." - ರೆಬೆಕಾ ಸಾಲ್ನಿಟ್, ವ್ಯಾಂಡರ್ಲಸ್ಟ್: ಎ ಹಿಸ್ಟರಿ ಆಫ್ ವಾಕಿಂಗ್
ಮೊಹಮ್ಮದ್ ಬನೋನ ನೋವಿನಿಂದ ನರಳುತ್ತಿದ್ದ.
ಸೊಳ್ಳೆ ಪರೆದೆಯ ಒಳಗೆ ಪಕ್ಕೆಗಳನ್ನು ಹಿಡಿದುಕೊಂಡು ದೇಹವನ್ನು ಮಡಿಚಿ ಮಲಗಿದ್ದ. ರಾತ್ರಿ 1:00ಗಂಟೆ ಮೀರಿತ್ತು. ಭೂಮಿಯ ಇನ್ನೊಂದು ಭಾಗವನ್ನು ಸೂರ್ಯ ಆಗಲೆ ತನ್ನ ಜಲಜನಕದ ಕುದಿಹಂಡೆಯಿಂದ ಉರಿಹಚ್ಚಿಸುತ್ತಿದ್ದ, ಇಲ್ಲಿ ತಲೆಯ ಮೇಲೆ ನಕ್ಷತ್ರ ಪುಂಜಗಳು ನೀಲಿ-ಹಸಿರಿನ ಸಮುದ್ರ ಜೀವಿಗಳಂತೆ ತಣ್ಣಗೆ ಬೆಳಗುತ್ತಿದ್ದವು.
"ನೀನು ಮಲಗುಹೋಗು," ಎಂದ ಬನೋನ ಉಸಿರೆಳೆಯುತ್ತಿದ್ದ. ನನ್ನನ್ನು ಹೋಗೆಂದು ಕೈಯಾಡಿಸುತ್ತ, ಕ್ಷೀಣ ಸ್ವರದಲ್ಲಿ. "ನಾನೀಗ ಆರಾಮಾಗಿದ್ದೇನೆ."
ಆದರೆ ನನ್ನ ಸೌದಿ ಪಯಣದ ಜೊತೆಗಾರನ ಆರೋಗ್ಯ ಹದಗೆಟ್ಟಿತ್ತು. ನನ್ನ ಟಾರ್ಚ್ ಬೆಳಕಿನ ಕಂಬದಲ್ಲಿ ಅವನ ಕಣ್ಣುಗಳು ಹೊಳೆದವು. ಆತ ಹೇಳಿದ, ಚಾಕುವಿನಿಂದ ಇರಿತಕ್ಕೊಳಗಾಗಿದ್ದೇನೆ ಎಂದು ಭಾಸವಾಗುತ್ತಿದೆ. ನಿಲ್ಲುವುದಕ್ಕೂ ಶಕ್ತಿಯಿರಲಿಲ್ಲ. ನಮ್ಮ ಸಾಮಾನು ಸರಂಜಾಮುಗಳ ಸರಬರಾಜುದಾರ, ಫರ್ಹಾನ್ ಶಯ್ಬನಿ. ಕಾರನ್ನು ಚಾಲುಗೊಳಿಸಿದ. ಹೊದಿಕೆಯೊಳಗಿದ್ದ ಒಂಟೆಗಳ ಮೇಲ್ವಿಚಾರಕ ಅವಾದ್ ಒಮ್ರಾನ್ ನನ್ನು ಎಬ್ಬಿಸಿದ್ದೆವು. (ಶಿಬಿರವನ್ನು ಕಾಯಬೇಕಲ್ಲ.) ಫರ್ಹಾನ್ ಮತ್ತು ನಾನು ಬನೋನ ನನ್ನು ಆಸ್ಪತ್ರೆಗೆ ಸೇರಿಸಲು ಹೊರಟೆವು.
ಕುಳಿತ್ತಿದ್ದ ಮುಂದಿನ ಸೀಟಿನಿಂದ ನಾ ಹಿಂತಿರುಗಿ ನೋಡಿದೆ: ನೂರಾರು ಪೌಂಡ್ಗಳಷ್ಟು ಅನವಶ್ಯಕ ಶಿಬಿರ ಸರಂಜಾಮುಗಳ ಮೇಲೆ ಬೋಳಿಸಿದ ತಲೆಯಿಂದ ಬುಲ್ಡಾಗ್ ನಾಯಿಯಂತಿದ್ದ ನನ್ನ ಸ್ನೇಹಿತ ಪವಡಿಸಿದ್ದ. ಒಂದು ದೊಡ್ಡ ಪರ್ಷಿಯನ್ ರತ್ನಗಂಬಳಿ ಸುತ್ತಿ ಕಾರಿನೊಳಗೆ ತುರುಕಿತ್ತು. ಅವಶ್ಯಕತೆಗಿಂತ ಹೆಚ್ಚಿದ್ದ ಮಲಗುವ ಹಾಸಿಕೆಗಳು, ನಾಲ್ಕೈದು ಶಿಬಿರದ ಕುರ್ಚಿಗಳು, ಒಂದು ಸಂಪೂರ್ಣ ಚಹಾ ಸೆಟ್,. ಎರಡು ಅತ್ಯಾಧುನಿಕ ಟೆಂಟ್ ಗಳು. ಹೊಂದಾಣಿಕೆಯಿಲ್ಲದಂತ ನಾಲ್ಕು ಶಿಬಿರ ಒಲೆಗಳು, ಎಲ್ಲೆಂದರಲ್ಲಿ ಸಿಕ್ಕಿಸಬಹುದಾದ ಬ್ಯಾಟರಿ ಚಾಲಿತ ವಿದ್ಯುತ್ ಪಂಕ. ಮತ್ತು ಎರಡು ದೊಡ್ಡ ನಿಗೂಢವಾದ ಪೆಟ್ಟಿಗೆಗಳು, ಅದರೊಳಗೆ ಸೀಸದ ತೊಲೆಗಳನ್ನು ತುಂಬಿದ್ದನೋ ಏನೋ ದೇವರೇ ಬಲ್ಲ. ಒಟ್ಟಿನಲ್ಲಿ ಬನ್ನೂನ ಮರುಭೂಮಿಯಲ್ಲಿ ಸುತ್ತಾಡುವಾಗಲೆಲ್ಲ ಒಂದು ಹಿಮಾಲಯದಷ್ಟು ಸಾಮಾನುಗಳನ್ನು ತುಂಬಿಕೊಂಡೇ ಓಡಾಡುತ್ತಿದ್ದ. ಆ ದುಸ್ಥಿತಿಯಲ್ಲೂ ಕಿರುನಗೆ ಬೀರುತ್ತಿದ್ದುದ್ದನ್ನು ಕಂಡೆ. (ಹೆದ್ದಾರಿಗಳ ಕಿತ್ತಳೆ ಬಣ್ಣದ ಬೆಳಕಿನುಂಡೆಗಳಲ್ಲಿ ಆತನ ಮುಖ ಆಗಾಗ ಬೆಳಕಿಗೆ ಬಂದು ಮತ್ತೆ ಅದೃಶ್ಯವಾಗುತ್ತಿತ್ತು.) ಅವನಿಗೆ ತಿಳಿದಿತ್ತು, ರೈಲಿನ ವ್ಯಾಗನ್ನಷ್ಟಿದ್ದ ಸಾಮಾನು ಸರಂಜಾಮುಗಳು ನನಗೆ ಅದೆಷ್ಟು ಕಿರಿಕಿರಿ ಮಾಡುತ್ತಿತ್ತೆಂದು. ಏಕೆಂದರೆ ಬೆಂಬಲಕ್ಕೆಂದು ತಂದಿದ್ದ ಕಾರು ಉಪಯೋಗಿಸುವುದು ಬೇಡವೇ ಬೇಡವೆಂದು ಅವನ ಜೊತೆ ವಾದಿಸಿದ್ದೆ. (ಇದು ಕಾಲ್ನಡಿಗೆಯ ಪಯಣ - ರಿಯಾದ್ನಲ್ಲಿ ಅವನಿಗೆ ಪಾಠ ಹೇಳಿದ್ದೆ - ಪ್ಯಾರಿಸ್ನಿಂದ ಡಕಾರ್ಗೆ ಓಡಿಸುವ ಕಾರ್ ರಾಲಿಯಲ್ಲ.) ಅವನು ಸಾಮಾನುಗಳನ್ನು ಹೇರಿದ್ದ ಜಿ.ಎಂ.ಸಿ. ಯುಕಾನ್ ಕಾರು ನನ್ನ ಒಂಟೆಗಳ ಕಾರ್ಯಕ್ಷಮತೆಯನ್ನು ಅಪಮಾನಿಸುತ್ತಿತ್ತು ಎಂದು ತಿಳಿದಿದ್ದೆ. ಈ ಕಾರನ್ನು ನಮ್ಮಿಂದ ದೂರ ಇಡು ಎಂದು ಹೇಳಿದ್ದರೂ ಇಂದು ಅವನನ್ನು ರಕ್ಷಿಸಲು ನೆರವಾಯಿತು. ಅಪಾಯದಿಂದ ಪಾರಾಗುವುದಕ್ಕೆ ಉಪಯೋಗವಾಯ್ತು. ಆತನ ಜೀವ ಉಳಿಯುತ್ತಿರುವುದರಿಂದ ಬನ್ನೋನ ತಾನೆ ಸರಿ ಎಂದು ರುಜುವಾತು ಪಡಿಸಿದ.
In Riyadh, Banounah prepares to load his gear into his support vehicle. The gilt frame stayed behind, but only just.
Paul Salopek
ಕತ್ತಲೆಯ ನಗರವನ್ನು ಪ್ರವೇಶಿಸಿದ್ದೆವು. ಖಾಲಿ ರಸ್ತೆಗಳು. ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು. ರಸ್ತೆಬದಿಯಲ್ಲಿ ಬನೋನ ವಾಂತಿ ಮಾಡಿದ. ರೆಡ್ ಕ್ರೆಸೆಂಟ್ ನಿಲ್ದಾಣದ ಹತ್ತಿರ ಅವನ ಜೊತೆ ಆಂಬುಲೆನ್ಸ್ ಹತ್ತಿದೆ. ಸ್ಟ್ರೆಚರ್ ಮೇಲೆ ಬನೋನ ಪುಟಿಯುತ್ತಿದ್ದ. ಫರಾನ್ನ ಕಾರಿನ ದೀಪಗಳು ಹಿಂಬಾಲಿಸುತ್ತಿದ್ದವು.
ನಾನೇಕೆ ಹೀಗೆ ವರ್ತಿಸುತ್ತಿದ್ದೇನೆ? ಬಡಪಾಯಿ ಬನೋನ ನನ್ನು ವಿಪತ್ತಿನೆಡಿಗೆ ನಡೆಸುತ್ತಿದ್ದೇನೆ?
ಕಾರಣಗಳ ಗಂಟುಗಳನ್ನು ಬಿಚ್ಚುತ್ತಾ ಹೋದರೆ ನನ್ನ ಮೆದುಳು ಭೂಮಿಯ ಚರಿತ್ರೆಗೆ ತೆರಳುತ್ತದೆ. ನಾನೀಗ ಪುನರ್ಅನ್ವೇಶಿಸುತ್ತಿರುವ ಆಫ್ರಿಕಾದ ಬೇಟೆಗಾರ ಮೂಲ ಮಾನವರ ಮನಸ್ಥಿತಿಯಲ್ಲಿದ್ದೇನೆ. ಕತೆಗಳನ್ನು ಹೇಳಲು, ನೋಡಲು, ಕೇಳಲು ಮತ್ತು ಯೋಚಿಸಲು, ಇತ್ಯಾದಿ . ಆದರೂ ಒಪ್ಪಿಕೊಳ್ಳಲೇ ಬೇಕು. ಏಕೆಂದರೆ ಕೆಲವು ಕ್ಷಮಿಸಲರ್ಹವಾದ ತಪ್ಪುಗಳಿಂದ. 19ನೇ ಶತಮಾನದ ದಾರ್ಶನಿಕರ ಕೆಲವು ಖಚಿತವಲ್ಲದ ಅಭಿಮತಗಳನ್ನು ನಂಬಿರುವುದರಿಂದ. (ಥುರಾಯು: "ಸಾವಿಲ್ಲದ ಸಾಹಸದೆಡೆಗೆ ಮುನ್ನಡೆಯಬೇಕು, ಹಿಂದಿರುಗುವಂತಿಲ್ಲ, ಸಂರಕ್ಷಿಸಿದ ಹೃದಯಗಳನ್ನು ಪೂಜ್ಯಾವಶೇಷಗಳಂತೆ ಪಾಳುಬಿದ್ದ ಸಾಮ್ರಾಜ್ಯಕ್ಕೆ ಹಿಂದಿರುಗಿಸಲಿಕ್ಕೆ,") ಅಥವಾ ನಿರ್ವಾಣ ಹೊಂದಿದ ಕವಿಗಳಂತೆ. (ಬಾಶೊ: "ಒಂದು ಎಳೆ ಎಲೆಯಿಂದ/ನಾನು ಕಣ್ಣೀರನ್ನು ಒರೆಸಬಲ್ಲೆ/ನಿನ್ನ ಕಣ್ಣಿಂದ".) ಅಥವ ಕನಸಿನ ಚಿಕ್ಕಂದಿನ ದಿನಗಳಲ್ಲಿ ಮಧ್ಯ ಮೆಕ್ಸಿಕೋದ ಪ್ರಸ್ಥಭೂಮಿಯಲ್ಲಿನ ಅಗ್ನಿ ಪರ್ವತಗಳ ಮೇಲಿನ ನೀಲಾಕಾಶವನ್ನು ಬೆಳಿಗಿನ ಜಾವ ದಿಟ್ಟಿಸುತ್ತಾ ಕಳೆದ ಅರ್ಧ ಮರೆತ ಆಕಸ್ಮಿಕ ಘಟನೆಗಳು. ಕಂಡದ್ದನ್ನೆಲ್ಲಾ ಆಸೆಯಿಂದ ಕೂಡಿಟ್ಟು ಕೊಂಡಂತೆ, ಅನೂಕೂಲವಾಗಬಹುದೇನೋ ಎಂಬಂತೆ ತುಂಬಿಟ್ಟಿದ್ದ ಚಿಂದಿ ಚೀಲ. ಬನೋನ ಕಾರಿಗೂ ನನ್ನ ತಲೆಗೂ ಅಂತಹ ವ್ಯತ್ಯಾಸವಿಲ್ಲವೆನಿಸಿತು.
ಆಸ್ಪತ್ರೆಯಲ್ಲಿ ಸುಡಾನಿ ವೈದ್ಯನೊಬ್ಬ ಬನೋನ ನರಗಳಿಗೆ ಸಲೈನ್ ದ್ರಾವಣದ ಚುಚ್ಚು ಮದ್ದನ್ನು ನೀಡಿದ. ನನಗೆ ಸಂತೈಸುತ್ತಾ "ನಿನ್ನ ಸ್ನೇಹಿತನ ದೇಹದಲ್ಲಿ ನೀರಿನ ಅಂಶ ಬಹಳ ಕಮ್ಮಿಯಾಗಿದೆ. ಆದ್ದರಿಂದ ನರಳುತ್ತಿದ್ದಾನೆ". ಆದರೆ ನಾನದನ್ನು ಒಪ್ಪಲಿಲ್ಲ. ನಿಜವಾದ ತೊಂದರೆ ಸಾಮರಸ್ಯವಿಲ್ಲದ ನಡಿಗೆಯಿಂದ.
ನಾನೊಬ್ಬ ಅಲೆಮಾರಿ. ಎಲ್ಲೆಂದರಲ್ಲಿ ತಿರುಗುತ್ತೇನೆ. ನಿಲ್ಲುತ್ತೇನೆ. ದಿಕ್ಕುಬದಲಿಸುತ್ತೇನೆ. ನನ್ನ ಕಾಲ್ಬೆರಳುಗಳಿಂದ ಮನಸ್ಸು ಬಂದಂತೆ ಗೀಚುತ್ತೇನೆ. ಆದರೆ ಬನೋನ ಅತ್ಯಂತ ಭಿನ್ನ ಸ್ವಭಾವದ, ಗುರಿಯನ್ನು ತಲುಪಲೇ ಬೇಕೆನ್ನುವವ. ಹಿಡಿದ ದಾರಿ ಬಿಟ್ಟು ಅತ್ತಿತ್ತ ಸರಿಯುವುದಿಲ್ಲ. ಹಳೇ ಸೈನಿಕ, ನಿಧಾನವಾಗಿ ನಡೆದರೂ ಅಂದಕೊಂಡಿದ್ದನ್ನು ಮಾಡಲೇ ಬೇಕೆಂದು ತೀರ್ಮಾನ ಹೊಂದಿರುವವನು. ಹೆದ್ದಾರಿಯಲ್ಲಿ ಸಿಗುವ ಸಣ್ಣ ಅಂಗಡಿಗಳಲ್ಲೆಲ್ಲಾ ನಿಂಬೆಪಾನಕಕ್ಕಾಗಿ ನುಗ್ಗುವುದು, ಜಿ.ಪಿ.ಎಸ್. ಹೊಂದಾಣಿಕೆಗೆ ಅತ್ತಿತ್ತ ತಿರುಗುವುದು ಅವನ ಜಾಯಮಾನ. ನಿನ್ನ ಶೃತಿಗೆ ಹೊಂದದಿರುವವನ ಜೊತೆ ನಡೆಯುವುದು ಅಸಾಧ್ಯದ ಸಂಗತಿ. ನಿಧಾನವಾಗಿಯಾದರೂ ವೇಗವಾಗಿಯಾದರೂ ಸರಿ ಸಂಬಂಧವಿಲ್ಲದ ನಡಿಗೆಯನ್ನು ಬಲವಂತವಾಗಿ ನಿಯಂತ್ರಿಸುವುದು ಇಬ್ಬರಿಗೂ ತೊಂದರೆ. 30,000 ದಿಂದ 40,000 ಹೆಜ್ಜೆಯೂಡಿಗೆಯ ನಂತರ - ದಿನಕ್ಕೆ 25 ಮೈಲಿಯ ಸರಾಸರಿಯಂತೆ ನಡೆಯುವಾಗ ತನಗೆ ತೋಚಿದಂತೆ ನಡೆಯುವ ಇಬ್ಬರ ಕಾಲುಗಳ ಘರ್ಷಣೆ ನೆಮ್ಮದಿಗೆಡಿಸುತ್ತೆ. ಕಾಲಿನ ಸ್ನಾಯುಗಳು ಕಿರುಗುಟ್ಟುತ್ತವೆ. ಕಾಲಿನ ಜೋಡಣೆಗಳು ಕುಸಿಯುತ್ತವೆ, ದೇಹ ವಿರೋಧಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ನೂರು ವರ್ಷಗಳ ಹಿಂದೆ ಮೋಂಟಾನಾ ಕಾಡುಗಳಲ್ಲಿ ಮರಗಳನ್ನು ಕಡಿಯುತ್ತಿದ್ದ ಮರಗೆಲಸದವರ ವಿವರಣೆ ಒಂದು ಕತೆಯಲ್ಲಿದೆ. 6 ಅಡಿಯ ಗರಗಸವನ್ನು ವಿರೋಧದ ದಿಕ್ಕುಗಳಲ್ಲಿ ತಳ್ಳುವುದು ಎಳೆಯುವುದು ಎಷ್ಟು ಸುಲಭ, ಕೆಲಸಗಾರರ ಮಾಂಸಖಂಡಗಳು ಸಂಯೋಜಿತವಾಗಿ ಕೆಲಸಮಾಡಿದರೆ, ಇಲ್ಲದಿದ್ದರೆ ಆದಷ್ಟು ಬೇಗ ಆಯಾಸವಾಗುವುದಂತೆ.
"ಗರಗಸವನ್ನು ಲಯದಲ್ಲಿ ಎಳೆಯುವುದು, ಎಷ್ಟು ಸುಂದರ, ಕೆಲವು ಸಲ ನೀವು ಏನು ಮಾಡುತ್ತಿದ್ದೀರ ಎನ್ನುವುದನ್ನು ಮರೆಸುವಷ್ಟು, ಶಕ್ತಿ ಮತ್ತು ಚಲನೆಗಳಲ್ಲಿ ಕಳೆದು ಹೋಗುವಷ್ಟು. ಆದರೆ ಗರಗಸದಲ್ಲಿ ಕುಯ್ಯುವುದು ಸಂಯೋಜಿತವಾಗಿಲ್ಲದಿದ್ದರೆ ಕಡಿಮೆ ಸಮಯದಲ್ಲೇ ಅಸ್ವಸ್ಥತೆ ಆವರಿಸುತ್ತದೆ. ಅದಕ್ಕಿಂತ ಹೆಚ್ಚೇನೋ ಸಮಸ್ಯೆ ಆಗುತ್ತಿರುವಂತೆ, ನಿಮ್ಮ ಹೃದಯ ಸರಿಯಾಗಿ ಕೆಲಸಮಾಡುತ್ತಿಲ್ಲವೆನ್ನುವಂತೆ".
ಆಸ್ಪತ್ರೆಯ ಕಾದುಕೂರುವ ಕೋಣೆಯ ದೀಪಗಳು ಶೀತಲವಾಗಿದ್ದವು. ಆದರೆ ಫಿಲಿಪ್ಪಿನೋ ದಾದಿಯರು ನಗುವುದು ಕೇಳುತ್ತಿತ್ತು. ಅದು ಬನೋನ. ಅವನ ಅಶ್ಲೀಲ ನುಡಿಗಳು. ಆತನದು ಒಂದು ಗುಣಾತ್ಮಕ ವ್ಯಕ್ತಿತ್ವ.
ಮರುಭೂಮಿಯಲ್ಲಿ ಹೇಗೆ ಬದುಕುಳಿಯುವುದು ಎಂಬುದನ್ನು ಅರೆಬಿಕ್ ಭಾಷೆಯಲ್ಲಿ ಬರೆದ ಒಬ್ಬನೇ ಲೇಖಕ ಈತ, ಬನೋನ ಒಬ್ಬ ಹವ್ಯಾಸಿ ಉರಗ ತಜ್ಞ, ಬೆಡೋಯಿನ್ ಜಾನಪದ ಕತೆಗಳ ಸಂಗ್ರಹಕಾರ, ಹವ್ಯಾಸಿ ವಾಸ್ತುಶಾಸ್ತ್ರಜ್ಞ, ಅದ್ಭುತ ವನ್ಯಜೀವಿ ಛಾಯಾಗ್ರಾಹಕ. ಈ ಹವ್ಯಾಸಗಳಲ್ಲಿ ತೊಡಗಿದ್ದಾಗ ಕಾರ್ಪೆಟ್ ವೈಪರ್ ಎಂಬ ಹಾವಿನಿಂದ ಬೆರಳುಗಳಿಗೆ ಕಡಿಸಿಕೊಂಡವನು. (ಪ್ರಪಂಚದಲ್ಲಿ ಈ ಜಾತಿಯ ಹಾವಿನಿಂದ ಕಡಿಸಿಕೊಂಡು ಸತ್ತವರ ಸಂಖ್ಯೆ ಅತ್ಯಧಿಕ), ಚೇಳುಗಳಿಂದ ಕಡಿಸಿಕೊಂಡಿದ್ದ, ಶಿಖರಾರೋಹಣ ಮಾಡುವಾಗ ಬಿದ್ದು ಕೈ ಮಣಿಕಟ್ಟುಗಳನ್ನು ಮುರಿದು ಕೊಂಡಿದ್ದ. ಅವನ ಸ್ನೇಹಿತನ ಮಗನ ಜೊತೆ ಮರುಭೂಮಿಯಲ್ಲಿ ಅತೀವೇಗವಾಗಿ ಓಡಿಸುವ ಕಾರಿನ ಹಿಂದೆ ಪ್ಯಾರಾಚೂಟ್ ಕಟ್ಟಿಕೊಂಡು ಹಾರುವಾಗ ಬಿದ್ದು ಕುಂಡಿಗಳ ಜೊತೆ ದೇಹದ ಹಿಂಬಾಗ ಉಜ್ಜಿಹೋಗಿತ್ತು. ಪ್ರಮುಖ ಗಾಲ್ಬ್ಲಾಡರ್ ಶಸ್ತ್ರ ಚಿಕೆತ್ಸೆಯ ನಂತರ 3 ತಿಂಗಳಲ್ಲೇ ಔಟ್ ಆಫ್ ಈಡನ್ ವಾಕ್ ನ್ನು ಸೇರಿದ್ದ.
"ಪಾಲ್, ನಿನಗೆ ಇಲ್ಲಿ ತೊಂದರೆ ಇದೆ," ಆಫ್ರಿಕಾದಿಂದ ಮೊದಲ ಬಾರಿ ಸೌದಿ ಅರೇಬಿಯಾದಲ್ಲಿನ ಪ್ರಯಾಣದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕರೆಮಾಡಿದಾಗ ಹೇಳಿದ.
ನಾನು ಸುಮ್ಮನಿದ್ದೆ, ಕೆಲವು ಕ್ಷಣಗಳು.
"ನಿನ್ನ ಹೆಸರು," ಆತ ಮುಂದುವರೆದ. "ಅರೇಬಿಕ್ ಭಾಷೆಯಲ್ಲಿ ಇದರ ಅರ್ಥ 'ಮೂತ್ರ.'"
ನಂತರ ಒಂದು ನಿಮಿಷದವರೆಗೆ ಕೇಕೆ ಹಾಕಿ ನಗುತ್ತಿದ್ದ.
ನಡಿಗೆ ಒಂದು ಭಾಷೆಯಂತೆ, ಒಂದು ಸಿದ್ದಾಂತದಂತೆ, ಒಂದು ವಿಶ್ಲೇಷಣೆಯಂತೆ, ಒಂದು ಖಗೋಳ ಜ್ಞಾನದಂತೆ: ಆದರೆ ಇಲ್ಲೇ ಹುಟ್ಟು ಹಾಕಿದ ಕಲ್ಪನೆ, ಅಳತೆ ಇರದಷ್ಟು ಅಸಂಖ್ಯಾತ ರೂಪಗಳು, ಪ್ರಾಂತೀಯ ಭಾಷೆಗಳು ಮತ್ತು ವಿವಿಧ ರೀತಿಯ ನಡಿಗೆಗಳು ನನ್ನ ಪ್ರಯಾಣದಲ್ಲಿ ಪ್ರತ್ಯಕ್ಷವಾಗಿ ಮತ್ತೆ ಅದೃಶ್ಯವಾಗುತ್ತವೆ. ಇನ್ನೆಷ್ಟು ಬಗೆಯ ಜೀವ ವರ್ಗೀಕರಣವನ್ನು ಈ ಪ್ರಪಂಚದಲ್ಲಿ ಬಳಸಿ ನಡೆಯಬೇಕು. ಇದೆಲ್ಲಕಿಂತ ಹೆಚ್ಚಾಗಿ ನನ್ನ ಈ ಪ್ರಯಾಣ ನಡಿಗೆ ಬದುಕುವುದೇ?
ಬನೋನ ಶೇಕಡ 83 ಭಾಗದಷ್ಟು ಸೌದಿಗಳಂತೆ ನಗರಪ್ರದೇಶಗಳಲ್ಲಿ ಬದುಕುವವನು. ಅವನಿಗೆ ಕಾರಿನ ಬೆಂಬಲವಿಲ್ಲದೆ ನಡೆಯಲು ಅಸಾಧ್ಯ, ಹಾಗಾಗಿ ಮನಸೇಚ್ಛೆ ತುಂಬಿದ್ದ ಯುಕಾನ್, ಅದನ್ನು ಚಲಿಸುತ್ತಿದ್ದ ಫರಾನ್ ಹಿಂಬಾಲಿಸುವುದನ್ನು ಮುಂದುವರಿಸಿದ್ದರು. ನನ್ನ ಗೊಣಗಾಟವನ್ನು ಕೇಳಲಾಗದೆ, ಕಾರು ಸುಮಾರು ದಿನಗಳು ಕಣ್ಮರೆಯಾಗುತ್ತಿತ್ತು. ಮತ್ತು ಬನೋನ ನಡಿಗೆಯ ಕೊನೆಯಲ್ಲಿದ್ದ, ಬೆಡೋಯಿನ್ ಬುಡಕಟ್ಟಿನವರ ಪಿಕ್ಅಪ್ ಕಾರುಗಳು ಸಿಕ್ಕಾಗ ಅವುಗಳೊಡನೆ ತನ್ನ ಬೇಡಿಕೆಯನ್ನು ಕಳುಹಿಸುತ್ತಿದ್ದ: ಕೆಲವು ಗಂಟೆಗಳ ನಂತರ, ನಮ್ಮ ಮಧ್ಯಾಹ್ನದ ಚಿಕನ್ ಮತ್ತು ಖಾದ್ಯಗಳೊಡನೆ ಪ್ರತ್ಯಕ್ಷವಾಗುತ್ತಿದ್ದವು. ನನ್ನ ಆಶ್ಚರ್ಯ ಸೂಚಕ ಮುಖಕ್ಕೆ ತನ್ನ ಆಡಿನ ಕರೆಯಂತ ನಗುವಿನೊಂದಿಗೆ ಉತ್ತರ ಹೇಳುತ್ತಿದ್ದ. ಆತ ಒಬ್ಬಅನ್ವೇಷಕನಂತೆ. ಆತ ಒಬ್ಬ ಬೇಟೆಗಾರನಂತೆ ಮತ್ತು ಸಂಗ್ರಹಕಾರನಂತೆ, ಆತ ಹತ್ತಿರ ಹತ್ತಿರ ನನಗಿಂತ ಮೊದಲು ಅನ್ವೇಷಣೆ ಮಾಡಿದ ಶಿಲಾಯುಗದ ಅಲೆಮಾರಿಗಳಂತಿದ್ದ.
ಸಂಪಾದಕರ ಸೂಚನೆ: ಮೆ ಅಂತ್ಯದಿಂದ ಜುಲೈ ಅಂತ್ಯದವರೆಗೆ ಪಾಲ್ ನ ಡಿಸ್ಪ್ಯಾಚಸ್ ಬಗ್ಗೆ ನಿಮ್ಮ ಟೀಕೆ ಟಿಪ್ಪಣಿಗಳನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಈಗ, ಇಂದಿನವರೆಗೆ ನಿಮ್ಮ ಟೀಕೆ ಟಿಪ್ಪಣಿಗಳನ್ನು ಮತ್ತು ಪಾಲ್ ನ ಪ್ರತಿಸ್ಪಂದನಗಳನ್ನು ಪ್ರಕಟಿಸಿದ್ದೇವೆ.
