ಶಾಖ.
ನಾವು ಅದರಿಂದ ಬಚ್ಚಿಟ್ಟುಕೊಳ್ಳುತ್ತೇವೆ. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ಪ್ರಯತ್ನಗಳೆಲ್ಲ ಕರುಣಾಜನಕ, ಅಸಂಬದ್ದ ಮತ್ತು ನಿಷ್ಪಲ. ಎಲ್ಲಿದ್ದರೂ ನಮ್ಮನ್ನು ಹುಡುಕುತ್ತದೆ. ನಮ್ಮ ಉಪಾಯ,ತಂತ್ರ ಮತ್ತು ರಕ್ಷಣೆಯೆಲ್ಲವನ್ನು ಅಣಕಿಸುತ್ತದೆ. ನಮ್ಮ ಸಂಕಲ್ಪವನ್ನು ಆವಿಯಾಗಿಸುತ್ತದೆ. ಶಾಖ ಯಾವಾಗಲೂ ಗೆಲ್ಲುತ್ತದೆ.
ಅಲಿ ಅಲ್ ಹರ್ಬಿ, ನಮ್ಮ ದುಭಾಷಿ. ಗಾಢ ಕತ್ತಲಲ್ಲಿ ನೆಟ್ಟಗೆ ಕಂಬದಂತೆ ಕುಳಿತಿದ್ದ, ಯಾವುದೇ ಪರಿಹಾರ ನೀಡದ ರಾತ್ರಿಗಳಲ್ಲಿ, ಅವನ ಹೃದಯ ದುಮುಗುಡುತ್ತಿತ್ತು. "ಇದು ಬಹಳ ಆಶ್ಚರ್ಯಕರವಾಗಿದೆ," ಎಂದು ಮೃದುವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಿದ್ದ, ಬೇರೆಯವರ ಸಮಸ್ಯೆ ಬಗ್ಗೆ ಮಾತನಾಡುವಂತೆ ಮಾತನಾಡುತ್ತಿದ್ದ. "ನನ್ನ ಉಸಿರಾಟ ತಹಬದಿಗೆ ಬರುತ್ತಿಲ್ಲ." ಆತ ಹೀಗೆ ಹೇಳಲು ಕಾರಣ, ವಾಸ್ತವದಲ್ಲಿ, ತನ್ನ ಶರೀರದ ಮೇಲೆ ಸಂಪೂರ್ಣ ನಿಯಂತ್ರಣವಿಲ್ಲದಿದ್ದುದು. ಅವನ ದೇಹವನ್ನು ಯಾವುದೋ ಹಾನಿಕಾರಕ ಶಕ್ತಿ ಆವರಿಸಿಕೊಂಡಿತ್ತು: ಶಾಖ. ತೀವ್ರವಾಗಿ ಉಸಿರಾಡುತ್ತಿದ್ದ, ಕುದಿಯುತ್ತಿರುವ ಗಾಳಿಯನ್ನು ಅವನ ಶ್ವಾಸಕೋಶಗಳು ಹೊರಹಾಕಲು ಹರಸಾಹಸ ಪಡುತ್ತಿದ್ದವು.
ಬೆಳಿಗ್ಗೆ 10 ಗಂಟೆ ಹೊತ್ತಿಗೆ ನಮ್ಮ ಒಂಟೆಗಳು ತಡವರಿಸುತ್ತಿದ್ದೆವು. ವಾಡಿ ಸಫ್ರಾದ ಮರಳು ದಿಣ್ಣೆಗಳ ಮೇಲೆ ದೊಡ್ಡದೇಹಿ ಫೇರ್ಸ್ ಮುಂದಡಿಯಿಡಲಾಗದೆ ಅನೇಕ ಸಲ ಕುಸಿದ, ನಾವು ಅವನಲ್ಲಿ ಗೋಗರೆಯುತ್ತಿದ್ದೆವು ( "ಒಳ್ಳೆ ಹುಡುಗನಾಗು, ಫೇರ್ಸ್," ಅಲಿ ಹೇಳುತ್ತಿದ್ದ. " ದಯವಿಟ್ಟು ಮೇಲೇಳು.") ಮರುಭೂಮಿಯ ಬಾವಿಗಳ ಕಡೆಗೆ ಪ್ರಾಣಿಗಳು ಧಾವಿಸಿದವು. ತೊಟ್ಟಿಯಲ್ಲಿ ನಿಂತಿದ್ದ ಹಸಿರು ಕಲ್ಮಷ ನೀರಿನಲ್ಲಿ ತಮ್ಮ ಇಡಿ ಮೂಗು ಬಾಯಿಯನ್ನು ಮುಳುಗಿಸಿ ಎರಡೇ ನಿಮಿಷದಲ್ಲಿ 5 ಗ್ಯಾಲನ್ಷ್ಟು ನೀರನ್ನು ಹೀರಿದವು. ಇದಕ್ಕೆ ತದ್ವಿರುದ್ದವಾಗಿ ನಾವು ಮನುಷ್ಯರು, ಸೂರ್ಯನ ಶಾಖವನ್ನು ತಪ್ಪಿಸಿಕೊಳ್ಳಲು ನಮ್ಮ ಚರ್ಮದೊಳಗೆ ಹುದುಗಿ ಕೊಂಡೆವು. ನಮ್ಮೊಳಗಿನ ಮೂಳೆಯ ಅತ್ಯಂತ ತಣ್ಣಗಿರುವ ಮಜ್ಜೆಯಲ್ಲಿ ಆಶ್ರಯ ಕೋರಿದೆವು.
Seema goes to the source at a desert well.
Paul Salopek
ಒಂದು ಮುಳ್ಳಿನ ಮರದ ಕೆಳಗೆ ನಿಂತಿದ್ದ ಅಲಿ. ತನ್ನ ಸೆಲ್ಫೋನನ್ನು ಎತ್ತಿ ಹಿಡಿದ. ಸಂದೇಶವೊಂದು ಬಂದಿತ್ತು: "ಈ ಉಪಕರಣ ಕಾರ್ಯನಿರ್ವಹಿಸಲಾಗದ ಉಷ್ಣಾಂಶವನ್ನು ಮೀರಿದೆ." ಅತಿ ಉಷ್ಣತೆಯಿಂದ ಸೆಲ್ಫೋನ್ ವಿಫಲವಾಗಿದೆ. ನನಗೆ ಅರ್ಥ ಮಾಡಿಸಲಿಕ್ಕೆ ಅಲಿ ಇದನ್ನು ಮೂರು ಬಾರಿ ವಿವರಿಸಬೇಕಾಯಿತು. ಮೂರ್ಖನಂತೆ ಅವನ ಕಡೆ ಕಣ್ಣು ಪಿಳಿ ಪಿಳಿ ಬಿಡುತ್ತಿದ್ದೆ. ನನ್ನ ತಲೆಯಲ್ಲಿನ ನರತಂತುಗಳೂ ಸಹ ಕರಗಿ ಹೋಗಿದ್ದುದು ಸ್ಪಷ್ಟವಾಗಿತ್ತು.
ನಮ್ಮ ಸರಬರಾಜುದಾರ, ಸಯಿದ್ ಅಲ್ ಫೈದಿ, ಪಿಜ್ಜಾದೊಂದಿಗೆ ಪ್ರತ್ಯಕ್ಷನಾದ. ಅವನ ಹೆಂಡತಿ ಬೇಯಿಸಿದ ಪಿಜ್ಜಾ, ಹಿಂದ್ ಯಾಹ್ಯ ಅಲ್ ಷರೀಫ್.
ಗಿಣ್ಣು, ಟೊಮೊಟೊ, ಆಲಿವ್ ಮತ್ತು ಮೆಣಸೆಲ್ಲವು ಮರುಭೂಮಿಯ ಸೂರ್ಯನ ಬೆಳಕಲ್ಲಿ ಭ್ರಾಂತಿ ಹಿಡಿದಂತೆ ಹೊಳೆಯುತ್ತಿದ್ದವು: 18 ಇಂಚುಗಳ ಮರೀಚಿಕೆ, ಹತ್ತಿರ ಒಂದು ವರ್ಷದಿಂದ ನಾನು ಪಿಜ್ಜಾ ನೋಡಿರಲಿಲ್ಲ. ಧೂಳು ತುಂಬಿದ ಬೆಡೋಯಿನ್ ಕಟ್ಟಡದ ಮೇಲೆ ಕುಳಿತು ತಿಂದೆವು. ನಂತರ ಸಯೀದ್ಗೆ ಹೇಳಿದೆ 'ಇನ್ನು ಮುಂದೆ ಇಷ್ಟು ಒಳ್ಳೆ ತಿನಿಸುಗಳನ್ನು ತರಬೇಡ ಎಂದು. ಅರೇಬಿಯಾದ ಯಾತ್ರೆ ಮುಗಿಯುವ ತನಕ ಊಟದ ಸರಬರಾಜು ಮಾಡಲಾರ. ನಮ್ಮನ್ನೆಲ್ಲಾ ಹಾಳುಗೆಡುವುತ್ತಾನೆ. (ಅವಾದ್ ಓಮ್ರಾನ್ ಒಂಟೆ ಮೇಲ್ವಿಚಾರಕ, ಡಬ್ಬಿಯಲ್ಲಿದ್ದ ಕಾಳುಗಳು, ಹಳಸಿದ್ದ ರೊಟ್ಟಿ, ನುಗ್ಗಾಗಿದ್ದ ಈರುಳ್ಳಿ, ಉಪ್ಪಾದ ನೂಡಲ್ಗಳ ಬಗ್ಗೆ ಆಗಲೇ ಆರೋಪ ಮಾಡುತ್ತಿದ್ದ.) ಆದರೆ ನಿಜವಾದಕಾರಣ ನನ್ನ ಸ್ವಾರ್ಥ. ನಗರದ ಇಂಥ ಭಕ್ಷ ಭೋಜನಗಳು ಮರುಭೂಮಿಯನ್ನು ಸವಿಯುತ್ತಿರುವ ನನ್ನ ನಾಲಿಗೆಯ ರುಚಿಯನ್ನು ಹಾಳು ಮಾಡುತ್ತವೆ. ಮರುಭೂಮಿಯ ಜೊತೆಯಿರುವ ನನ್ನ ಸಾಮರಸ್ಯವನ್ನು ಹಾಳುಗೆಡವುತ್ತದೆ. ನನ್ನ ಇಂದ್ರಿಯಗಳಿಗೆ ಚಾವಟಿಯೇಟು ನೀಡುತ್ತದೆ. ಅದರ ಕೃತಕತೆ, ಸಂಪದ್ಭರಿತ ಹೆಜಾಜ್ ಮರಭೂಮಿಯ ಸ್ಟಟಿಕದಂತ ಶೂನ್ಯಭಾವನೆಯ ಮೇಲೆ ಸವಾರಿಮಾಡತೊಡಗುತ್ತದೆ. ಬೆಂಕಿಯ ಕುಂಡದಂತ ಅಸೀಮ ಮರುಭೂಮಿ ವಿಸ್ತರಿಸುತ್ತಿದೆಯೇನೋ ಎಂದೆನಿಸುತ್ತದೆ. ಹೆಚ್ಚು ಪರಕೀಯ, ಹೆಚ್ಚು ದುರ್ಗಮ, ಹೆಚ್ಚು ಅವಾಸ್ತವ. (ಟಿ.ಇ. ಲಾರನ್ಸ್, ಸಿರಿಯಾದ ಅವಶೇಷವೊಂದರ ಬಗ್ಗೆ ಒಂದೆಡೆ ಹೇಳುತ್ತಾನೆ. ಒಬ್ಬ ರಾಣಿಯ ಅಂತಃಪುರ, ಪ್ರತಿಯೊಂದು ಕೊಠಡಿಗಳನ್ನು ಕಟ್ಟಿದ್ದಾಗ ಹೂವುಗಳ ತೈಲಿಗಳನ್ನು ಮರ್ದಿಸಿದ್ದಾರೆ. ಮಲ್ಲಿಗೆ, ನೇರಳೆ, ಗುಲಾಬಿ. ಅವನ ಮಾರ್ಗದರ್ಶಿ ಹೇಳುತ್ತಾನೆ "ಬನ್ನಿ ಅತ್ಯಂತ ಮನೋಹರವಾದ ಸುವಾಸನೆಯನ್ನು ಸವಿಯಬನ್ನಿ," ಎನ್ನುತ್ತಾ ಮರುಭೂಮಿಯ ಮಾರುತ ಬೀಸುವೆಡೆ ತೆರೆದು ಕೊಂಡಂತ ಕೊಠಡಿಗೆ ಕರೆದೊಯ್ದು "ಇದು ಅತ್ಯಂತ ಶ್ರೇಷ್ಠ: ಇದಕ್ಕೆ ಸುವಾಸನೆಯೇ ಇಲ್ಲ.")
Saeed al Faidi (right) brings his wife’s homemade pizza to celebrate our first well camp.
Paul Salopek
ಒಂದು ವಾರದ ನಂತರ, ಸಯೀದ್ ನಾವು ನಡೆಯುತ್ತಿರುವ ಜಾಡಿನಲ್ಲಿ ಕಾಣಿಸಿಕೊಳ್ಳುತ್ತಾನೆ.
ಈ ಬಾರಿ ಆತ ತನ್ನ ಹೆಂಡತಿ ತಯಾರಿಸಿದ್ದ ಚಾಕೋಲೇಟ್ ಕೇಕನ್ನು ತಂದಿದ್ದ.
ಆತ ನನ್ನ ಮುಖಭಾವವನ್ನು ಗಮನಿಸಿ. "ಇದು ನಮ್ಮ ಮದುವೆ ವಾರ್ಷಿಕೋತ್ಸವದ್ದು," ಎಂದು ವಿವರಿಸಿದ, ತನ್ನ ಕೈ ಮೇಲೆತ್ತಿ ಆಹಾರದ ಬಗ್ಗೆ ನನಗೆ ಇರುವ ಭಿನ್ನ ಅಂಧಾಭಿಪ್ರಾಯವನ್ನು ದಮನಿಸಿದ. "ನನ್ನ ಹೆಂಡತಿಗೆ ಹೇಳಿದೆ, 'ನಮ್ಮ ಪ್ರೀತಿಯನ್ನು ಇವರೊಡನೆ ಹಂಚಿಕೊಳ್ಳೋಣ."'
ಈ ಕೇಕ್ ಸಮರ್ಥನೆ ನೀಡಿತು. ಅದರ ಅರ್ಧ ಭಾಗವನ್ನು ಮಾತ್ರ ತಿಂದೆವು. ಅರೇಬಿಕ್ ಅಕ್ಷರಗಳಲ್ಲಿ ಅಲಂಕರಿಸಿದ್ದ ಅರ್ಧಭಾಗ: ನಾ ನಿನ್ನನ್ನು ಪ್ರೀತಿಸುತ್ತೇನೆ.
ಒಳನಾಡಿನತ್ತ ಮುನ್ನಡೆದೆವು.
ತಾರೀಖ್ ಅಲ್ ಹಜ್ ದಾರಿಯನ್ನು ಹಿಡಿದಿದ್ದೆವು. ಸಿರಿಯಾ ಮತ್ತು ಜೋರ್ಡಾನಿನ ಬಿಲಾದ್ ಅಲ್ —ಶಾಮ್ನಿಂದ ಪವಿತ್ರ ಪಟ್ಟಣಗಳಾದ ಮೆಕ್ಕಾ ಮತ್ತು ಮದೀನಾಗೆ ಬಹಳ ಹಿಂದೆ ಯಾತ್ರಾರ್ಥಿಗಳು ತೆರಳುತ್ತಿದ್ದು ಈಗ ಬಳಕೆ ಬಿಟ್ಟಿರುವ ದಾರಿ.
ನವಿರಾದ ಮಂಜು ಮುಸುಕಿದಂತ ಪರ್ವತಗಳು. ಗಾಳಿಯಲ್ಲಿ ಕುಂಚದಿಂದ ಚಿತ್ರಿಸಿದಂತೆ, ಸೂರ್ಯನ ಕಿರಣಗಳು ಕಣಿವೆಗಳಲ್ಲಿ ಧುಮುಗುಡುತ್ತಿತ್ತು. ಕಿತ್ತಳೆಯ ಬಣ್ಣದ ತೊಗಟೆ ಹೊದ್ದ ಸಾಹುರ್ ಮರಗಳು ಅಲ್ಲಲ್ಲಿ ಚದುರಿದಂತೆ ಬೆಳೆದಿದ್ದು ನೆರಳಿನ ಜೀವಾಮೃತ ನೀಡುತ್ತಿದ್ದವು. ಅತಿಯಾದ ಬಿಸಿಲಿನಿಂದ ನನ್ನ ಕಿವಿಗಳು ಗುಯ್ಗುಡಲಾರಂಭಿಸಿತು, ಶ್ರವಣ ಭ್ರಾಂತಿಯಿಂದ ತತ್ತರಿಸಿದೆ - ಗಂಟೆಯ ಶಬ್ದ ಬಿಟ್ಟು ಬಿಟ್ಟು ಅನುರಣಿಸುತ್ತಿತ್ತು .
ಹಾಗಾಗಿಲ್ಲ - ಅದು ನನ್ನ ಸೆಲ್ಫೋನ್.
ಮಹಿಳೆಯರು, ಕರೆ ಮಾಡುತ್ತಲೇ ಇದ್ದಾರೆ.
ಅವರ ಫೋನ್ ನಂಬರ್ಗಳು ಪರಿಚಯವಿಲ್ಲದವು. ಅವರೆಲ್ಲ ಅಪರಿಚಿತರು. ನನಗರ್ಥವಾಗದ ಅರೇಬಿಕ್ ಭಾಷೆಯಲ್ಲಿ ಗೋಳುಗರೆಯುತ್ತಾ ಪ್ರಶ್ನಿಸುತ್ತಾರೆ. ಡಜನ್ನಿನಷ್ಟು ಅಥವಾ ಇನ್ನೂ ಹೆಚ್ಚಿರಬಹುದು. ಯಾರವರು? ಹೇಳಲಿಕ್ಕಾಗದು. ನನ್ನ ನಂಬರ್ ಹೇಗೆ ಸಿಕ್ಕಿತು? ನನಗಂತೂ ಒಂದಿನಿತೂ ಕಲ್ಪನೆಯಿಲ್ಲ. ಆದರೆ ಮೊಬಿಲಿ ಎಂಬ ವಿಶಿಷ್ಟ ಎಮಿರಾತಿ ಟೆಲಿಫೋನ್ ಸಂಪರ್ಕ ಸಂಸ್ಥೆಯದ್ದೆ ಕೆಲಸವಿರಬಹುದು ಎಂಬ ಸಂದೇಹ. ಅದು ಹಳೆ ಫೋನ್ ನಂಬರ್ ಗಳನ್ನು ಮರುಬಳಕೆಗೆ ತರುತ್ತದೆ. ಬಹುಶಃ ನನ್ನ ಫೋನ್ ನಂಬರ್ ದಿಗಿಲು ಹುಟ್ಟಿಸುವ ಅಸ್ತಿತ್ವ ಸಿದ್ಧಾಂತದ ಬಗ್ಗೆ, ಪಿಡುಗನ್ನು ಹಚ್ಚಿಕೊಂಡಿರುವ ಅರಬ್ ಹೆಂಗಸರ, ಶುಲ್ಕ ರಹಿತ ಕರೆಗಳಾಗಿರಬಹುದು. 'ಮಾಲೇಶ್, ಮಾಲೇಶ್," ಎನ್ನುತ್ತಾ ಆತಂಕ ಭರಿತ ಕರೆಗಳಿಗೆ "ಅರಬಿ ಭಾಷೆ ಗೊತ್ತಿಲ್ಲ" ಎಂದು ಫೋನ್ ತುಂಡರಿಸುತ್ತೇನೆ. ಆದರೆ ಅವರು ಮತ್ತೆ ಕರೆ ಮಾಡುತ್ತಾರೆ.
ಒಂದು ಹೆಂಗಸು 40 ರಿಂದ 50 ಬಾರಿ ಕರೆ ಮಾಡಿದ್ದಳು. ಅಲಿಗೆ ಫೋನ್ನನ್ನು ಹಸ್ತಾಂತರಿಸಿದೆ.
"ತಪ್ಪು ಸಂಖ್ಯೆಗೆ ಕರೆ ಮಾಡುತ್ತಿದ್ದೀಯ," ಆತ ಕಟುವಾಗಿ ತಿಳಿಸಿದ
"ನನಗ್ಗೊತ್ತು," ಎಂದು ಹೇಳಿ, ಫೋನ್ ಕೆಳಗಿಟ್ಟಳು.
ನಂತರ ನನಗೆ ಹೊಳೆಯಿತು: ಈ ಸೌದಿ ಮಹಿಳೆಯರು. ಏಕಾಂಗಿಗಳು. ಬೇಸರ. ಲಿಂಗಾಧಾರಿತ ಸಂಪ್ರದಾಯಸ್ಥ ಸಮಾಜದ ಕಟಕಟೆಗಳ ಹಿಂದೆ ಮುದುರಿ ಕುಳಿತಿರುತ್ತಾರೆ. ಬುರ್ಖಾ ಸಮಾಜದ ಬಂದಿಗಳು. ಅವರ ಹವಾನಿಯಂತ್ರಿತ ತಣ್ಣನೆಯ ವಿಷಾದ ತುಂಬಿದ ಸಾಂದ್ರತೆಯ ಗಾಳಿ ನನ್ನ ಕಿವಿಗೆ ಸೋಂಕಿದಂತೆ ನನಗೆ ಭಾಸವಾಗುತ್ತಿತ್ತು. ಜಡತೆಯ ಒಂಟಿತನ ಗುಯ್ಗುಡುತ್ತಿತ್ತು, ಅವರ ಬಳಗದ ಹೊರಗೆ ಯಾವುದೆ ಮಾನವೀಯ ವಿಧದ ಸಂಪರ್ಕಕ್ಕೆ ಹಾತೊರೆಯುತ್ತಿದ್ದರು. ನಾ ನಿರ್ಧರಿಸಿದೆ: ಯಾವುದೆ ಅನುಕಂಪದ ಕಿವಿ ಅವರಿಗೆ ಸಾಕಾಗುವುದು (ಆಲಕ್ಷ್ಯಭರಿತ ವಿದೇಶಿಯನಾದರೂ ಸರಿ). ಹಾಗಾಗಿ ಅವರು ಕರೆ ಮಾಡುವುದನ್ನು ಮುಂದುವರೆಸಿದ್ದರು. ಎಂತಹ ದುರಂತ! ಸುಮಾರು ತಿಂಗಳುಗಳಿಂದ ಸೌದಿಜನಸಂಖ್ಯೆಯ ಅರ್ಧಭಾಗದಷ್ಟಿರುವ ಇವರ ಪ್ರತಿನಿಧಿಗಳನ್ನು ಸಂದರ್ಶಿಸಲು ಯತ್ನಿಸುತ್ತಿದ್ದೇನೆ. ಇದು ಅಷ್ಟೇನು ಸುಲಭದ ಕಾರ್ಯವಲ್ಲ, ಅದರಲ್ಲೂ ನಮ್ಮ ಪಯಣದ ದಾರಿಯ ಅಭುಕ್ತ ಮೂಲೆಗಳಲ್ಲಿ ನೆಲೆಸಿರುವ ಬುಡಕಟ್ಟುಗಳೊಡನೆ. ಸಾಕಷ್ಟು ಶ್ರಮ ಬೇಕು. ಮತ್ತು ಈಗ, ಮೊಬಿಲಿ ಕಂಪೆನಿಯ ಸ್ವೇಚ್ಛಾಚಾರದ ಗ್ರಾಹಕ ಸೇವೆಯ ಮಟ್ಟಕ್ಕೆ ನನ್ನ ವಂದನೆಗಳು, ಕೊನೆಗೂ ಪರದೆ ಸರಿಯುತ್ತಿದೆ. ವಿದ್ಯುನ್ಮಾನ ಸಂಪರ್ಕದಿಂದಲಾದರೂ ಸರಿಯೆ. ಆದರೆ ಅರ್ಥ ಮಾಡಿಕೊಳ್ಳಲಾಗುತ್ತಲೆ ಇಲ್ಲ. ಈ ಮಹಿಳೆಯರಿಗೆ ನನ್ನ ಹೃದಯ ಮಿಡಿಯುತ್ತದೆ.
"ಮೊಬಿಲಿ ಕಂಪನಿ ನಿನಗೆ ಬಹಳ ಆಶ್ಚರ್ಯಕರ ನಂಬರನ್ನು ಕೊಟ್ಟಿದೆ," ಒಂಟೆಯ ಮೇಲೆ ಕುಳಿತಿದ್ದ ಅಲಿ ನಂತರ ನನಗೆ ಹೇಳಿದ. "ಆ ಮಹಿಳೆಯರೆಲ್ಲಾ? ಯಾವುದೊ ಕಾರ್ಮಿಕ ಕಚೇರಿಗೆ ಕರೆ ಮಾಡುತ್ತಿದ್ದೇವೆಂದು ತಿಳಿದ್ದಿದ್ದಾರೆ. ಮನೆಕೆಲಸಕ್ಕಾಗಿ ಹೆಂಗಸರನ್ನು ಹುಡುಕುತ್ತಿದ್ದಾರೆ."
ಜಾಡಿಲ್ಲದ ಮರುಭೂಮಿಯಲ್ಲಿ ಆಶ್ಚರ್ಯಕರ ವಸ್ತುಗಳನ್ನು ಬಳಸಿ ನಡೆಯುತ್ತಿದ್ದೆವು.
ಟೈರ್ಗಳು, ಆರಾಮ ಕುರ್ಚಿಗಳು, ಊಟದ ಮನೆಯ ಮೇಜುಗಳು, ಸುತ್ತಿದ್ದ ರತ್ನಗಂಬಳಿಗಳು, ಕಛೇರಿಯ ತಿರುಗು ಕುರ್ಚಿಗಳು, ಒಂದು ದೂರದರ್ಶನದ ಡಬ್ಬ - ಅಸ್ತವ್ಯಸ್ತವಾದರೂ ಈ ತ್ಯಾಜ್ಯವಸ್ತುಗಳನ್ನು ಒಂದೇಗೆರೆಯಲ್ಲಿ ಜೋಡಿಸಿದ್ದರು. ಕೆಲವು ಆಯತಾಕಾರದಲ್ಲಿ, ಇನ್ನು ಕೆಲವು ಚೌಕಾಕಾರದಲ್ಲಿ. ಪೀಠೋಪಕರಣಗಳಿಂದ ಗಾಳಿತಡೆಯೆ? ಅನ್ಯಗ್ರಹಜೀವಿಗಳಿಗೆ ಏನಾದರೂ ಸೂಚನೆಯೆ? ನೈಸರ್ಗಿಕ ಕಲಾಕೃತಿಯೆ? ಇಲ್ಲ: ಬೆಡೋಯಿನ್ ಬುಡಕಟ್ಟಿನವರ ರಕ್ಷಣಾ ತಡೆಗೋಡೆಗಳು. ಹಿಂದೆ ಮರಳಿನಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದ ಜಾಗವನ್ನು ಗುರುತಿಟ್ಟುಕೊಳ್ಳಲು.
"ಬೇಲಿಯನ್ನು ನಿರ್ಮಿಸಲು ಇಲ್ಲಿ ಏನೂ ಇಲ್ಲ," ನಮ್ಮ ಸರಬರಾಜುದಾರ, ಸಯೀದ್, ಹೇಳಿದ. "ಬೆಡೋಯಿನ್ಗಳು ನಗರಕ್ಕೆ ತೆರಳಿ ಕಸದ ಗುಂಡಿಗಳಿಂದ ಇವುಗಳನ್ನು ಇಲ್ಲಿಗೆ ಸಾಗಿಸಿ ಮರುಭೂಮಿಯಲ್ಲಿ ಬೇಲಿ ನಿರ್ಮಿಸುತ್ತಾರೆ."
ಈ ಸೌದಿ ನಿರುಪಯುಕ್ತ ವಸ್ತುಗಳ ಗುಣಮಟ್ಟ ಬಹಳ ಉತ್ತಮ. ಬೇಲಿಗೆ ಉಪಯೋಗಿಸುವ ಕೆಲವು ವಸ್ತುಗಳು ಬಹಳ ಆತ್ಮೀಯ, ಹೃದಯ ಸ್ಪರ್ಶಿ. ಒಂದು ಅಡುಗೆಮನೆಯ ಕಪಾಟಿನಲ್ಲಿ ಚೈನಾ ಪಿಂಗಾಣಿ ವಸ್ತುಗಳು ಜೋಡಿಸಿದ್ದವು. ಮಕ್ಕಳ ಆಟದ ವಸ್ತುಗಳು. ಸ್ಟೇನ್ಲೆಸ್ ಸ್ಟೀಲ್ನ ಅಡುಗೆಯ ಚಮಚಗಳು ಒಂದು ಮೇಜಿನೊಳಗಿದ್ದವು. (ಅವದ್ ಇಂತಹುದನ್ನೆಲ್ಲಾ ಪರಿಶೀಲಿಸಿ, ನಮ್ಮ ಶಿಬಿರದ ಉಪಕರಣಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತಿದ್ದ.) ಇದರಿಂದ ಅನಿರೀಕ್ಷಿತವಾಗಿ ನಮ್ಮ ಸಮಕಾಲೀನ ಪ್ರಪಂಚ ಕೊನೆಗೊಂಡಂತಾಯಿತು. ಹೆಜಾಜ್ನ ಮರಳಿನ ಬೀಸುಗಾಳಿ ಇದ್ದಕ್ಕಿದ್ದಂತೆ ಮಾಯವಾದಂತೆ. ನಮ್ಮ ಭವಿಷ್ಯದ ಮೇಲೆ ಬೆಳಕು ಚೆಲ್ಲಿದಂತೆ: ಕಳೆದುಹೋದ ಅಟ್ಲಾಂಟಿಸ್, ಆದರೆ ಟಪ್ಪರ್ವೇರ್ನಿಂದ ನಿರ್ಮಿಸಿದ್ದು.
ಎಲ್ ರೀಸ್ನಲ್ಲಿ ಮೂರನೆ ದಿನ ಮರುಭೂಮಿಯಲ್ಲಿ ಬಂದೂಕು ಹಾರಿಸಿದ ಸದ್ದು. ಪಾಪ್... ಪಾಪ್… ಪಾಪ್.
ಪಾರಿವಾಳಗಳನ್ನು ಬೆನ್ನತ್ತಿದ್ದ ಬೇಟೆಗಾರರು. ಆದರೆ ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದವು. ಕುದಿಯುತ್ತಿದ್ದ ಮರುಭೂಮಿಯಲ್ಲಿ ಹಳೆಯ ಹೈಲಕ್ಸ್ ಕಾರ್ಗಳಲ್ಲಿ ಸುತ್ತಾಡುತ್ತಿದ್ದರು, ಹೊಸ ಮಾದರಿಯ ಲ್ಯಾಂಡ್ ಕ್ರೂಸರ್ಗಳು, ಕಿಟಕಿ ಗಾಜನ್ನು ಇಳಿಸಿ ಮುಳ್ಳು ಮರಗಳು, ಕುರುಚಲು ಪೊದೆಗಳತ್ತ, ಸಾಮಾನ್ಯ ಗುಬ್ಬಚ್ಚಿಗಳತ್ತ ಗುಂಡು ಹಾರಿಸುತ್ತಿದ್ದರು, ಅಲ್ಲಿ ಕುಳಿತಿದ್ದ ಬೇರೆ ಹಕ್ಕಿಗಳತ್ತ ಸಹ.
A dead bird, made of plastic and brass.
Paul Salopek
ಸೌದಿ ಅರೇಬಿಯಾದ ಪರಿಸರಕ್ಕೆ ಸಂಬಂದಪಟ್ಟ ಕಾನೂನುಗಳು ಪ್ರಪಂಚದ ಬೇರೆಲ್ಲೆಡೆಯೆಷ್ಟೇ ಕಠಿಣ. ಇಲ್ಲಿಯೂ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಬಂಧನದಲ್ಲಿ ತಳಿ ಸಂವರ್ಧಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ ಇದು ಬಹಳ ವಿಸ್ತಾರವಾದ ದೇಶ. ನಿಯಂತ್ರಣವಿಲ್ಲದ ದೂರದೂರದ ಮರುಭೂಮಿಗಳಲ್ಲಿ, ಬೇಟೆಯಾಡಿ ತಿಂದು ಬದುಕುವ ಕಾಡಿನ ಕಾನೂನು ಇನ್ನೂ ಜಾರಿಯಲ್ಲಿದೆ. ನನಗೆ ತಿಳಿದಿರುವಂತೆ ಹೆಜಾಜ್ ಮರುಭೂಮಿಯ ನೈಸರ್ಗಿಕ ಮೇಲ್ಮೈ ಅತ್ಯಂತ ನಿಶ್ಚಲ, ನೀರವ, ಸ್ಥಬ್ಧ ಮರುಭೂಮಿ.
ಇವರು ಕೆಟ್ಟ ಮನುಷ್ಯರೇನಲ್ಲ. ಸ್ನೇಹಜೀವಿಗಳು. ಒಬ್ಬ ನಿಂತು ಕುಡಿಯಲಿಕ್ಕೆ ತಣ್ಣನೆಯ ನೀರನ್ನು ಕೊಟ್ಟ. ಆದರೆ ಬೆಡೋಯಿನ್ ಬುಡಕಟ್ಟಿನ ಇವರ ತಾತ ಮುತ್ತಾಂದಿರು ಹೇಗೆ ಬೇಟೆಯಾಡುತ್ತಿದ್ದರು ಎನ್ನುವುದನ್ನು ಊಹಿಸಲು ಯತ್ನಿಸಿದೆ - ತಾಳ್ಮೆಯ ಮರುಭೂಮಿ ಬೇಟೆಗಾರರು, ಬರಿಗಾಲಲ್ಲಿ ಹೊಂಚುಹಾಕುತ್ತಲೂ, ಒಂಟೆಯ ಮೇಲೆ ಸವಾರಿ ಮಾಡುತ್ತಾ ಭರ್ಜಿಗಳನ್ನು ಹಿಡಿದು, ಅಪಾಚೆಗಳ ರೀತಿ ಪ್ರಾಣಿಗಳ ಚಲನವಲನ ಹಿಡಿಯುತ್ತಾ - ಎನ್ಹೇಳಬಹುದು ಈ ಮೋಟಾರ್ ಗಾಡಿಗಳ ಹಾವಳಿಗೆ. ಯಾವುದಾದರೂ ಒಂದು ಅರ್ಥಗರ್ಭಿತ ಪದ ಹುಡುಕಲು ಯತ್ನಿಸಿದೆ. ಇದಂತೂ ಬೇಟೆಯಲ್ಲ.
"ಇದು," ಅಲಿ ಹೇಳಿದ, "ಮಾರುಕಟ್ಟೆಯಲ್ಲಿ ಸಾಮಾನು ಕೊಂಡಂತೆ."
ಹೌದು.
ಐದು ದಿನಗಳ ನಡಿಗೆಯ ನಂತರ, ಡಾಂಬರಿಕರಣದ ರಸ್ತೆ ಸಿಕ್ಕಿತು.
Ali and Fares contemplate the Anthropocene.
Paul Salopek
ಕೆಂಪು ಸಮುದ್ರದಿಂದ ನೂರಾರು ಮೈಲಿ ಕ್ರಮಿಸಿದ್ದೆವು, ಬಾಣಲೆಯಲ್ಲಿ ಹುರಿಯುತ್ತಿರುವಂತ ಮರಳು ಕಣಗಳ ನಡುವೆ, ಕಂದು ಬಣ್ಣದಲ್ಲಿ ಬೆಳಗುತ್ತಿದ್ದ ಮರಳು ದಿಣ್ಣೆಗಳ ನಡುವೆ, ಯನ್ಬು ಅಲ್ ನಕಲ್ ಎಂಬ ಬೆಟ್ಟದ ತಪ್ಪಲಿನ ಹಳ್ಳಿಯನ್ನು ತಲುಪಿದೆವು. ಇದು ನನ್ನ ಜೀವನದ ಅತ್ಯಂತ ಕಡು ಬಿಸಿಲಿನ ನಡಿಗೆ - ನನ್ನ ಇಡಿ ಪ್ರಯಾಣ ಕಥೆಯೇ ಇಲ್ಲಿ ಅಡಗಿದೆ, ಆದರೆ ಇದು ಪ್ರಪಂಚದಗಲ ನರ್ತಿಸ ಹೊರಟಿರುವ ನೂರಾರು ಹೆಜ್ಜೆಗಳಲ್ಲಿ ಒಂದು ಕಿರು ಹೆಜ್ಜೆ.
ನಮ್ಮಲ್ಲೇ ಕೈಕುಲುಕಿದೆವು. ಅಲಿ, ಅವದ್ ಮತ್ತು ನಾನು. ಒಂದು ಕಾರು ನಿಂತಿತು. ನಮ್ಮ ಛಾಯಾಚಿತ್ರಗಳನ್ನು ತೆಗೆದುಕೊಂಡರು. ಅವರು ನನ್ನನ್ನು ಪಾಕಿಸ್ತಾನಿ ಎಂದರು.
ನನ್ನ ಸೆಲ್ಫೋನ್ ನಾಲ್ಕು ದಿವಸಗಳಲ್ಲಿ ಮೊದಲ ಬಾರಿ ರಿಂಗಣಿಸಿತು. ಯಾವುದೋ ಅಪರಿಚಿತ ಹೆಂಗಸು. ಅವಳು ಕೇಳಿದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರಲಿಲ್ಲ.
