ಮಾರ್ಕ್ ಪ್ರಾವಿಸರ್ ನನಗೆ ಒಬ್ಬ ಪ್ಯಾಲೆಸ್ಟೇನಿಯನ್ನ್ನು ತೋರಿಸಲು ಕರೆದೊಯ್ಯುವೆನೆಂದ. ಅವನು ಹಾಗೆಯೇ ನಡೆದುಕೊಂಡ, ಧೂಳು ತುಂಬಿದ್ದ ಅವನ ಎಸ್.ಯು.ವಿ. ವಾಹನದಲ್ಲಿ ತಾನು ವಾಸಿಸುತ್ತಿದ್ದ ಇಸ್ರೇಲಿ ವಸಾಹತುವಿನಿಂದ - ಬೈಬಲ್ ಯುಗದ ಶೈಲೋವಿನಲ್ಲಿ ದೇವರೊಡನೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಇಟ್ಟಿರುವ ಶಿಬಿರದಿಂದ - ಭದ್ರತಾ ಗೋಡೆಯನ್ನು ದಾಟಿ, ವಿದ್ಯುತ್ ಬಾಗಿಲನ್ನು ದಾಟಿ, ಖಲೀದ್ ದರಾಗ್ ಮ್ಹೆ ಯ ಕೊಳಕಾಗಿದ್ದ ಹೊಲಕ್ಕೆ ಕರೆದೊಯ್ದ.
Khaled Daraghmeh.
Bassam Almohor
ದರಾಗ್ ಮ್ಹೆ ನಮ್ಮನ್ನು ನೋಡಲು ಇಷ್ಟಪಡಲಿಲ್ಲ. ಈ ಪ್ಯಾಲೆಸ್ಟೇನಿಯನ್ ವ್ಯವಸಾಯಗಾರ ಪೈರಿನ ಕೂಳೆಯಂತ ಬಿಳಿ ಗಡ್ಡಬಿಟ್ಟು, ಕಪ್ಪು ಕೂದಲಿನ, ಕೆಲಸದ ಮಣ್ಣು ಅಂಟಿಕೊಂಡಿದ್ದ ಪ್ಯಾಂಟ್ ಧರಿಸಿದ್ದ. ಕಣ್ಣುಗಳು ಎಚ್ಚರಿಕೆಯಿಂದಿದ್ದವು.
"ಯಾರು ನೀನು?" ಎಂದು ಕಟುವಾಗಿ ಕೇಳಿದ. "ಏನು ಬೇಕಿತ್ತು?"
"ಸಭಾ-ಇಲ್-ಕೈರ್!" ಪ್ರಾವಿಸರ್ ಉತ್ತರಿಸಿದ: "ಶುಭ ಮುಂಜಾನೆ!" ಆತನೊಬ್ಬ ತೃಪ್ತಿಯಿರುವ ಯೋಧ. ಬೆಚ್ಚಗೆ ನಗುತ್ತಿದ್ದ. ಧರಿಸಿದ್ದ ಜೀನ್ಸ್ ಪ್ಯಾಂಟಿನ ಸೊಂಟ ಪಟ್ಟಿಯಲ್ಲಿ ಪಿಸ್ತೂಲಿತ್ತು, ಶರಟಿನ ಹಿಂಭಾಗ ಪಿಸ್ತೂಲನ್ನು ಮುಚ್ಚಿತ್ತು. ಕೈ ಕುಲುಕಲು ಮುಂದೆ ಹೋಗಲಿಲ್ಲ ಏಕೆಂದರೆ ಆತನಿಗೆ ಗೊತ್ತಿತ್ತು ದರಾಗ್ಮ್ಹೆ ಕೈ ಕುಲುಕುವುದಿಲ್ಲವೆಂದು.
ಅಮೆರಿಕದಲ್ಲಿ-ಹುಟ್ಟಿದ ಯಹೂದಿ, ಪ್ರಾವಿಸರ್ ಒಂದು ಇಸ್ರೇಲಿ ದತ್ತಿಗೆ ಭದ್ರತಾ ಸಲಹೆಗಾರ, ವೆಸ್ಟ್ ಬ್ಯಾಂಕಿನಲ್ಲಿ ನೆಲೆಸುತ್ತಿರುವ ಇಸ್ರೇಲಿ ವಸಾಹತುದಾರರಿಗೆ ಸಹಾಯ ಮಾಡುತ್ತಿರುವ ಒಂದು ಸಂಸ್ಥೆ. ಶೈಲೂವಿನ ಹತ್ತಿರ ನನ್ನ ಪ್ರಯಾಣಕ್ಕೆ ಅಲ್ಪ ವಿರಾಮ ಕೊಟ್ಟಿದ್ದೆ. ನನಗೆ ಈ ವಿವಾದಾತ್ಮಕ ಹೊರಶಿಬಿರಗಳನ್ನು ಭೇಟಿ ಮಾಡುವ ಇಚ್ಛೆ ಇತ್ತು, ಇಸ್ರೇಲಿ ವಸಾಹತುಗಾರರನ್ನು ಭೇಟಿ ಮಾಡಬೇಕಿತ್ತು. ಪ್ರಾವಿಸರ್ನ ಸಮುದಾಯ, ಮತ್ತು ಜೊತೆಗಾರರು, ದರಾಗ್ಮ್ಹೆ ಉಳುತ್ತಿದ್ದ ಜಮೀನಿನಿಂದ ಎತ್ತಂಗಡಿ ಮಾಡಲು ಯತ್ನಿಸುತ್ತಿದ್ದರು. ಅವನಿಗೆ ಆ ಜಮೀನನ ಮೇಲೆ ಹಕ್ಕಿಲ್ಲವೆಂದು ಪ್ರತಿಪಾದಿಸುತ್ತಿದ್ದರು. ಆದರೆ ದರಾಗ್ಮ್ಹೆ ಈ ಹುಲ್ಲಿನ-ಬಣ್ಣದ ಜಮೀನು ನಮ್ಮ ಕುಟುಂಬಕ್ಕೆ ಶತಮಾನಗಳಿಂದ ಸೇರಿತ್ತು ಎನ್ನುತ್ತಿದ್ದ. ಈ ವಿವಾದ ಬಹಳ ವರ್ಷಗಳಷ್ಟು ಹಿಂದಿನದು. ಇಬ್ಬರು ಬದ್ಧ ವೈರಿಗಳು.
"ಯಾವುದರ ಬಗ್ಗೆ ಮಾತಾಡಬೇಕು?". ಪ್ರಾವಿಸರ್ ನನಗೆ ಇಂಗ್ಲಿಷ್ನಲ್ಲಿ ಹೇಳಿದ.
ಅಲ್ಲೆ ಟೈರ್ಗಳ ಮೇಲೆ ಇಟ್ಟಿದ್ದ ಹಳೆ ಪ್ಲೈವುಡ್ ಹಲಗೆಯ ಕಡೆ ಕಣ್ಣಾಡಿಸಿದೆ. ಅದು ದರಾಗ್ಮ್ಹೆ ರಸ್ತೆಬದಿಯ ಅರ್ಪಣೆಗಳನ್ನು ಪ್ರದರ್ಶಿಸಿದ್ದ ಮೇಜು: ಸೋಡ ಬಾಟಲ್ನಲ್ಲಿ ಇದ್ದ ಆಲೀವ್ ಹಣ್ಣುಗಳು, ಹಿಡಿಯಷ್ಟು ವಾಲ್ನಟ್, ಗಟ್ಟಿಯಾಗಿದ್ದ ಕಿತ್ತಲೆಗಳು. ಒಡಕು ಅರೇಬಿಕ್ ನಲ್ಲಿ ಪ್ಯಾಲೇಸ್ಟಿನಿಯನ್ನರ ಜಮೀನಿನ ಬಗ್ಗೆ ಪ್ರಶ್ನಿಸಿದ.
"ಅಲ್ಲಿ ನೆಲೆಸುತ್ತಿರುವ ವಸಾಹತುದಾರರು ಅವನ ಮೇಲೆ ದಾಳಿ ಎಸೆಗುತ್ತಿದ್ದಾರೆ ಎಂದು ಹೇಳಿದ," ಪ್ರಾವಿಸರ್ ಭಾಷಾಂತರಿಸಿದ. "ದಾಳಿ ಎಸಗಿ ತನ್ನ ಕೈ ಮುರಿದಿದ್ದಾರೆಂದು, ಈಗ ತಾನೆ ಆಸ್ಪತ್ರೆಯಿಂಂದ ಹೊರಗೆ ಬಂದಿರುವೆನೆಂದು ಹೇಳುತ್ತಿದ್ದಾನೆ. ಆದರೆ ಅದು ನಿಜವಲ್ಲ. ಆರೋಗ್ಯವಾಗಿರುವುದು ನನ್ನ ಕಣ್ಣಿಗೆ ಕಾಣುತ್ತಿದೆ."
ಆಹ್ವಾನ ರಹಿತ ಅತಿಥಿಗಳು ಜಾಗ ಬಿಟ್ಟು ಕದಲದಿರುವುದನ್ನು ಗಮನಿಸಿ, ದರಾಗ್ಮ್ಹೆ ಸಾಂಪ್ರದಾಯಿಕ ಅರೇಬಿಕ್ ಸೌಜನ್ಯವನ್ನು ಬಲವಂತವಾಗಿ ತಂದುಕೊಂಡ. ದಣಿದವನ ಭಂಗಿಯಲ್ಲಿ, ಅಲ್ಲೆ ಮುರಿದು ಬೀಳುತ್ತಿದ್ದ ಲತಾ ಮಂಟಪದಲ್ಲಿ ಕೂರಲು ಸೂಚಿಸಿದ. ಆತನ 14 ವರ್ಷದ ಹುಡುಗನಿಗೆ ನಮ್ಮ ಭೇಟಿಯ ವಿಡಿಯೋ ಚಿತ್ರೀಕರಣವನ್ನು ನಿಲ್ಲಿಸಲು ಸೂಚಿಸಿದ. ಆ ಹುಡುಗ ಹತ್ತು ಹೆಜ್ಜೆ ದೂರದಲ್ಲಿ ಮುಖದ ಮುಂದೆ ಕ್ಯಾಮೆರಾ ಇಟ್ಟುಕೊಂಡು ಸುತ್ತಾಡುತ್ತಿದ್ದ. ಯುರೋಪಿಯನ್ ಮಾನವ ಹಕ್ಕುಗಳ ಪ್ರತಿನಿಧಿಗಳಿಂದ ವಸಾಹತುದಾರರ ಜೊತೆಯ ಸಂಘರ್ಷವನ್ನು ದಾಖಲಿಸಲು ತರಭೇತಿ ಹೊಂದಿದ್ದ. ಹುಡುಗ ನಿಲ್ಲಿಸಲು ಒಪ್ಪಲಿಲ್ಲ. ಚಿತ್ರೀಕರಣ ಮುಂದುವರೆಸಿದ. ದರಾಗ್ಮ್ಹೆ ಆತನತ್ತ ಕೂಗಿದ. ಕೋಪದಿಂದ ಹುಡುಗನಿಗೆ ಚಹಾ ತರಲು ಈ ರೈತ ಸೂಚಿಸಿದ. ಹುಡುಗ ಮೆಲ್ಲಗೆ ಮರೆಯಾದ.
ಮಧ್ಯವಯಸ್ಸಿನ ಇಬ್ಬರು ಗಂಡಸರು, ಒಬ್ಬ ಹೊರಗೆ ಓಡಾಡುವಾಗ ಧರಿಸುವ ಉತ್ತಮ ಬಟ್ಟೆಗಳನ್ನು ಮತ್ತು ಆಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಧರಿಸುವಂತೆ ಹರಿದಿದ್ದ ಬಟ್ಟೆಗಳನ್ನು ಇನ್ನೊಬ್ಬ ಧರಿಸಿದ್ದು ಆ ಮುರುಕಲು ಕುರ್ಚಿಗಳ ಮೇಲೆ ಆತಂಕದಿಂದ ಕುಳಿತರು. ನೆರಳಲ್ಲಿದ್ದ ಹಳೆ ಕಾರಿನ ಕುರ್ಚಿಗಳು.
"ಅಲ್ಲಿ ಹುಚ್ಚು ತರುಣ ವಯಸ್ಸಿನ ಹುಡುಗರು ನಮ್ಮ ಸಮಸ್ಯೆಗಳ ಮಧ್ಯೆ ತೊಂದರೆ ತಂದೊಡ್ಡುತ್ತಾರೆ," ದರಾಗ್ಮ್ಹೆ ಕೊನೆಗೂ ಬಾಯ್ಬಿಟ್ಟ. ಪ್ಯಾಲೇಸ್ಟಿನಿಯನ್ ನ ಕಲ್ಲು-ತೂರುವ ಹುಡುಗರ ಬಗ್ಗೆ ಉಲ್ಲೇಖಿಸಿದ. "ನಾನು ಶಾಂತಿಯಿಂದ ಬದುಕಲು ಇಚ್ಛಿಸುತ್ತೇನೆ. ಕಿತ್ತಳೆ ಬೆಳೆಯಲು ನನ್ನ ಹೊಲದಲ್ಲೇ ಬದುಕಲು ಇಷ್ಟ."
"ಆತ ಸರಿ." ಪ್ರಾವಿಸರ್ ತಲೆಯಲ್ಲಾಡಿಸಿದ. ಆತ ಜೊತೆಗೆ ಸೇರಿಸಿದ: "ಎರಡೂ ಕಡೆಯ ತರುಣರು ನಮ್ಮಂತ ಹಳಬರಿಗಿಂತ ಹೆಚ್ಚು ಕಠಿಣವಾಗಿದ್ದಾರೆ. ನಾನಂತು ಸಂಪ್ರದಾಯಸ್ಥ ನಿಜ. ಆದರೆ ನನ್ನ ಮುಂದಿನ ಜನಾಂಗ ನನಗಿಂತ ಹೆಚ್ಚು ತೀವ್ರವಾದಿಗಳಾಗಿದ್ದಾರೆ. ಅವರಿಗೂ ಸಾಕಾಗಿ ಹೋಗಿದೆ. ಉಗ್ರವಾದಿಗಳೊಡನೆ ಯಾವುದೇ ಹೋರಾಟಕ್ಕೆ ಹಿಂಜರಿಯುವುದಿಲ್ಲ. ಅವರಿಗೆ ನೆನಪುಗಳೇ ಇಲ್ಲ."
ಯುವಕನಾಗಿದ್ದಾಗ ಹೇಗೆ ಪ್ಯಾಲೆಸ್ಟೇನಿಯನ್ನರ ಜೊತೆ ಬೆರೆಯುತ್ತಿದ್ದೆ ಎಂದು ಪ್ರಾವಿಸರ್ ವಿವರಿಸಿದ. ಆಗ ಎಲ್ಲವೂ ಸಡಿಲವಿತ್ತು. ಆತ ವೆಸ್ಟ್ ಬ್ಯಾಂಕ್ನಲ್ಲಿ ಪ್ಯಾಲೇಸ್ಟಿನಿಯನ್ ಬಸ್ಗಳಲ್ಲಿ ಓಡಾಡುತ್ತಿದ್ದ. ಹೆಬ್ರಾನ್ನ ಹಮ್ಮೂಸ್ ಹೋಟೆಲ್ಗಳಲ್ಲಿ ತಿನ್ನುತ್ತಿದ್ದ. ಈಗ ಅವೆಲ್ಲಾ ಹಳೆಯ ನೆನಪುಗಳಷ್ಟೆ. ಪ್ಯಾಲೆಸ್ಟೇನಿಯನ್ ಉಗ್ರಗಾಮಿಗಳ ಜೊತೆ ಹೋರಾಟ ನಡೆಯುವಾಗ ವೆಸ್ಟ್ ಬ್ಯಾಂಕ್ನಲ್ಲಿ ಹತ್ತಿ ಉರಿಯುವ ಬೆಂಕಿಯನ್ನು ಆರಿಸಲು ನೆರವಾಗಿದ್ದ. ಆಲೀವ್ ಮರಗಳ ತೋಪಿನಲ್ಲಿ ವಿರೋಧಿಗಳನ್ನು ಸದ್ದಿಲ್ಲದೆ ಭೇಟಿಯಾಗಿ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಿದ್ದನೆಂದು ಆತ ಹೇಳಿದ. ಇಸ್ರೇಲಿ ಸೈನ್ಯದಲ್ಲಿರುವ ಅವನ ಇಬ್ಬರು ಬೆಳೆದ ಮಕ್ಕಳು ಖಂಡಿತ ಈ ಕೆಲಸ ಮಾಡುವುದಿಲ್ಲ.
"ಅವರು ಪ್ಯಾಲೆಸ್ಟೇನಿಯನ್ನರ ಜೊತೆ ಸಂಬಂಧ ಹೊಂದಲು ಇಚ್ಛಿಸುವುದೇ ಇಲ್ಲ," ಎಂದು ಹೇಳಿದ. "ಅವರಿಗೆ ಆ ಅವಕಾಶವೆ ದಕ್ಕಿಲ್ಲ. ಸಂಘರ್ಷದಿಂದಾಚೆಗಿನ ಯಾವುದೇ ರೀತಿಯ ವ್ಯವಹಾರದ ಕಟ್ಟುಪಾಡುಗಳು ಅವರಿಗೆ ಇರುವುದಿಲ್ಲ."
(ಈ ಭೇಟಿಯ ನಂತರ, ಎರಡು ಕಡೆಯ ತೀವ್ರಗಾಮಿಗಳು ಗಾಜಾ ಪಟ್ಟಿಯ ಹತ್ತಿರ ಯುದ್ದದ ಕಿಡಿಯನ್ನು ಹಚ್ಚಿದ್ದಾರೆ. ಮೂವರು ಇಸ್ರೇಲಿ ಹದಿಹರೆಯದವರನ್ನು ಅಪಹರಿಸಿ ವೆಸ್ಟ್ ಬ್ಯಾಂಕಿನಲ್ಲಿ ಕೊಲೆಮಾಡಲಾಗಿದೆ; ಒಬ್ಬ ಪ್ಯಾಲೆಸ್ಟೇನಿ ಯುವಕನನ್ನು ಅಪಹರಿಸಿದ್ದಾರೆ, ಸೇಡು ತೀರಿಸಲು ಇಸ್ರೇಲಿಗಳು ಅವನನ್ನು ಜೀವಂತ ಸುಟ್ಟಿದ್ದಾರೆ - ಇಬ್ಬರು ತರುಣರನ್ನು ಸೇರಿ.)
ದರಾಗ್ಮ್ಹೆ ನ ಹುಡುಗ ನಾವು ಕುಳಿತಿದ್ದಲ್ಲಿಗೆ ಚಹಾವನ್ನು ನೀಡಿದ. ಅವನ ಮಗುವಿನಂತ ಮುಖ ನಮ್ಮ ಮೇಲಿನ ತಿರಸ್ಕಾರದಿಂದ ಸುಕ್ಕುಗಟ್ಟಿ, ಕ್ರೋಧ ಉಕ್ಕುತ್ತಿತ್ತು. ಅವನ ಹೊಲದಿಂದ ನಾವು ವಾಹನವನ್ನು ಚಲಾಯಿಸಿಕೊಂಡು ಹೊರಬಂದೆವು. ದರಾಗ್ಮ್ಹೆ ರಸ್ತೆಯ ಬದಿಯಲ್ಲಿ ನಿಂತಿದ್ದನ್ನು ನಾನು ನೋಡಿದೆ ಕೆಂಪು ಕಣ್ಣಿನ ಆ ವ್ಯಕ್ತಿಯನ್ನು ನೋಡಿದರೆ ವರ್ಷಗಟ್ಟಳೆ ನಿದ್ರೆ ಮಾಡದವನಂತಿತ್ತು.
ಅಂದು ರಾತ್ರಿ ಖಾಲಿಯಿದ್ದ ಪ್ರಾವಿಸರ್ನ ಸೈನಿಕ ಮಗನ ಕೋಣೆಯಲ್ಲಿ ಕಳೆದೆ. ಫಿಲಿಡೆಲ್ಫಿಯ ಈಗಲ್ನ ಫುಟ್ಬಾಲ್ ಭಿತ್ತಿ ಪತ್ರ ಗೋಡೆಗೆ ಅಂಟಿಸಿತ್ತು. ಅವನ ಮನೆ ಯುನೈಟೆಡ್ ಸ್ಟೇಟ್ಸ್ ನ ಯಾವುದಾದರೂ ಉಪನಗರಗಳಲ್ಲಿರುವ ಮನೆಯಂತಿತ್ತು. ಪ್ರಾವಿಸರ್ ಕುಟುಂಬ ಅನೌಪಚಾರಿಕ, ಸ್ನೇಹ ಜೀವಿಗಳು. ಪ್ರಾವಿಸರ್ನ ಹೆಂಡತಿ ಸೂರಿ ನೇಯ್ಗೆಯಲ್ಲಿ ಅತ್ಯುತ್ತಮ ಪರಿಣತಿ ಹೊಂದಿದವಳು: ಹತ್ತಿಯಿಂದ ಸಾಂಪ್ರದಾಯಿಕ ಯಹೂದಿ ಮಕ್ಕಳ ತೊಟ್ಟಿಲುಗಳನ್ನು ಸೃಷ್ಟಿಸುತ್ತಿದ್ದಳು. ಹೊರಗೆ, ಅವರ ಶೈಲೋ ವಸಾಹತಿನ ಸುತ್ತ, ರಕ್ಷಣಾ ಬೇಲಿಯಿದ್ದು ಚಿಕ್ಕ ಜೈಲನ್ನು ನೆನಪಿಸುತ್ತಿತ್ತು, ಅಲ್ಲೊಂದು ಯಹೂದಿಗಳ ಮಂದಿರವಿತ್ತು, ಶಾಲೆಯಿತ್ತು, ಒಂದು ವಸ್ತು ಸಂಗ್ರಹಾಲಯವೂ ಇತ್ತು. (ಪ್ರಾಚ್ಯವಸ್ಥು ಸಂಶೋಧನಾಕಾರರಂತೆ ಸೋಗು ಹಾಕಿದ್ದ ಇಸ್ರೇಲಿಗಳು ಅಲ್ಲೊಂದು ವಸಾಹತನ್ನು ಸ್ಥಾಪಿಸಿದ್ದರು.) ಅಲ್ಲೊಬ್ಬ ಸೂಪರ್ ಮಾರ್ಕೆಟ್ನ ಮುಂದೆ ಒಂದು ಅಂಗಡಿಯಲ್ಲಿ ಗಿಣ್ಣುಗಳನ್ನು ಮಾರುತ್ತಿದ್ದ. ಪ್ರಾವಿಸರ್ ತನ್ನ ತೈಲ ವರ್ಣ ಚಿತ್ರಗಳನ್ನು ತೋರಿಸಿದ. ನ್ಯೂಯಾರ್ಕ್ ನಗರದಲ್ಲಿ ಒಂದು ಸ್ಟುಡಿಯೋವನ್ನು ಬಾಡಿಗೆಗೆ ತೆಗೆದುಕೊಂಡಿದ್ದ.
"ನನಗೊಂದು ಕನಸಿದೆ," ಆತ ನನಗೆ ಹೇಳಿದ. "ಈ ಎಲ್ಲಾ ಒತ್ತಡಗಳಿಂದ ದೂರಾಗಿ ಅಲಾಸ್ಕದಲ್ಲಿ ವರ್ಣಚಿತ್ರ ರಚಿಸುತ್ತಾ ಕಾಲ ಕಳೆಯಬೇಕೆಂಬ ಕನಸು."
ಆದರೆ ಮಾರ್ಕ್ ಪ್ರಾವಿಸರ್ ಅಲ್ಲಿರುವ ಹಿಮಸಾರಂಗ ಮತ್ತು ಹಿಮಕರಡಿಗಳನ್ನು ನೋಡುವುದಿಲ್ಲ. ಅಲ್ಲಿರುವ ವರ್ಣಮಯ ಅರೋರ ಪ್ರಭಾವಳಿಯ ಅಡಿಯಲ್ಲಿ ಚಿತ್ರಿಸುವುದಿಲ್ಲ. ಈತ ಎಂದಿಗೂ ವೆಸ್ಟ್ ಬ್ಯಾಂಕ್ನ್ನು ತೊರೆದು ಹೆಪ್ಪುಗಟ್ಟಿದ ಧೃವಪ್ರದೇಶಕ್ಕೆ ಹೋಗುವುದೇ ನನಗೆ ಅನುಮಾನ.
"ಹಾಗಾದರೆ, ಅಲ್ಲೆಲ್ಲಾ ಹೇಗಿತ್ತು?" ನನ್ನ ಪ್ಯಾಲೆಸ್ಟೇನಿ ಮಾರ್ಗದರ್ಶಕ, ಬಾಸಮ್ ಅಲ್ಮೋಹರ್, ಕೆಲವು ದಿನಗಳ ನಂತರ ಕೇಳಿದ. ಆತನ ಕುತೂಹಲದಲ್ಲಿ ಪ್ರಾಮಾಣಿಕತೆ ಇತ್ತು.
ನಾವು ಉತ್ತರಕ್ಕೆ ಒಟ್ಟಾಗಿ ನಡೆಯುತ್ತಿದ್ದೆವು, ಬಾಸಮ್ ಮತ್ತು ನಾನು - ಹಳೆ ಕ್ಯಾರವಾನ್ಗಳ ನಗರ ನೆಬ್ಲುಸ್ಗೆ ತೆರಳುತ್ತಿದ್ದೆವು. ಶೈಲೋ ವಸಾಹತಿಗೆ ಭೇಟಿ ನೀಡಲು ಬಾಸಮ್ಗೆ ಅನುಮತಿ ಕೊಡಿಸಲು ಪ್ರಾವಿಸರ್ ಪ್ರಯತ್ನಿಸಿದ್ದ. ವಿಫಲವಾದದ್ದಕ್ಕೆ ಆತ ಕ್ಷಮೆಯಾಚಿಸಿದ್ದ.
Marc Prowisor (at right) chats with Shilo’s security officer in the Israeli settlement’s supermarket.
Paul Salopek
ನಾನೇನು ಹೇಳಬಹುದೊ ಅದನ್ನು ಬಾಸಮ್ಗೆ ಹೇಳಿದೆ: ಪ್ರಾವಿಸರ್ ಮತ್ತು ದರಾಗ್ಮ್ಹೆ ನ ನಡುವೆ ಕಂಡ ಭಾವನಾ ಯುದ್ಧದ ಕಿಡಿಯ ಬಗ್ಗೆ. ಮುಂದಿನ ಯುವಕರು ಕಠಿಣವಾಗುತ್ತಿರುವ ಬಗ್ಗೆ. ನಾನು ಚಿಲ್ಡ್ರನ್ಸ್ ಕ್ರೂಸೇಡ್ ಕತೆಯ ಬಗ್ಗೆ ಯೋಚಿಸುತ್ತಿದ್ದೆ: ಹೇಗೆ, 800 ವರ್ಷಗಳ ಹಿಂದೆ, ಯುರೋಪ್ನ ಧರ್ಮಾಧಿಕಾರಿಗಳು ಬೀದಿ ಬದಿಯ ಮಕ್ಕಳ ಸೈನ್ಯಕ್ಕೆ ಭೂಮಿಯ ಆಸೆ ತೋರಿಸಿ ಅವರ ಮುಗ್ಧತೆಯ ಮೂಲಕ ಪರಿವರ್ತಿಸಲು ಮತ್ತು ಗೆಲ್ಲಲು ಹೊರಟ ಬಗ್ಗೆ. ಮತ್ತು ಹೇಗೆ ವ್ಯಾಪಾರಿಗಳು ಹಡಗಿನ ತುಂಬ ಮಕ್ಕಳನ್ನು ತುಂಬಿ, ನೀಡಿದ ಭರವಸೆಯನ್ನು ಬಿಟ್ಟು, ಗುಲಾಮಗಿರಿಗೆ ಮಾರಿದ ಬಗ್ಗೆ.
