ನಾವು ಮೌಂಟ್ ಕಾರ್ಮೆಲ್ ನ ಬೆಂಕಿ ಹತ್ತಿ ಉರಿದು ಹೋಗಿದ್ದ ಅರಣ್ಯ ಪ್ರದೇಶವನ್ನು ದಾಟಿ ಪರ್ವತ ಶ್ರೇಣಿಯ ಅಂಚಿಗೆ ಬಂದೆವು, ಕಲ್ಲಿದ್ದಲು-ಪುಡಿ ಉದಿರಿಸಿದ್ದಂತ ಮಣ್ಣು. ಎಳೆಯ ಪೈನ್ ಮರಗಳ ನಡುವಿನಲ್ಲಿ. ನಂತರ ಕೆಳಗೆ, ಕೆಳಗೆ, ಕೆಳಗೆ - ಕುಪ್ಪಳಿಸುತ್ತಾ ದೃಜ್ ಹಳ್ಳಿಯನ್ನು ದಾಟಿ ಹರಿಯುತ್ತಿದ್ದ ಕೊರಕಲುಗಳು, ಉಪಯೋಗಿಸದೆ ಇರುವ ಸಿಪಾಯಿಗಳ ಬಂದೂಕು ಗುರಿ ತಾಣ, ಚದುರಿದಂತಿದ್ದ ಅರಣ್ಯ ಪ್ರದೇಶದ ಒಳನಾಡಿನಲ್ಲಿ ಪ್ರವಾದಿ ಎಲಿಜಾ ಗಡಿಪಾರಾಗಿ ಜೀವನ ನಡೆಸುತ್ತಿದ್ದಾಗ ದೇವರು ಕಳಿಸಿದ ಕಾಡು ಕಾಗೆಗಳು ಅವರಿಗೆ ಆಹಾರ ಪೂರೈಸುತ್ತಿದ್ದವಂತೆ - ಅಥವ ಸ್ನೇಹಜೀವಿ ಅರಬ್ ಕುರಿಗಾಹಿಗಳಿರಬಹುದು. ಬೈಬಲ್ಲಿನ ವಿದ್ವಾಂಸರಲ್ಲಿ ಒಮ್ಮತವಿಲ್ಲ.
ಪ್ಯಾಲೆಸ್ಟೇನ್, ಇಸ್ರೇಲ್ ಭೂ ಪ್ರದೇಶ , ಸಿಸ್ ಜೋರ್ಡಾನ್, ಜಂಡ್ ಫಿಲಾಸ್ಟಿನ್ -ಕನಾನ್ ಮೂಲಕದ -ಪ್ರಯಾಣ ಮುಗಿಯುತ್ತಾ ಬಂದಿದೆ.
ನನ್ನ ಇಸ್ರೇಲಿ ಸಹ ಪ್ರಯಾಣಿಕ ಹಾಡುತ್ತಿದ್ದ.
ಯುವಾಲ್ ಬೆನ್-ಅಮಿ ಒಬ್ಬ ಚಿಂತಕ, ರಸ್ತೆ ಬದಿಯ ಕಲಾವಿದ, ಲೇಖಕ, ರೇಡಿಯೋ ಕಾರ್ಯಕ್ರಮ ನಡೆಸಿಕೊಡುವವನು. ಆತ ದಣಿವರಿಯದ ಪ್ರಯಾಣಿಕ. ನನ್ನ ಸೆಲ್ಫೋನ್ ರಿಂಗಣಿಸಿತು: "ಎಲ್ಲಾದರೂ ನಡೆದು ಹೋಗೋಣವೆ" ಬೆನ್-ಅಮಿಯ ಗಂಭೀರ ಧ್ವನಿ. "ನಾಜ಼ರೆತ್ಗೆ ಹೋದರೆ ಹೇಗೆ? ಅಲ್ಲಿ ಒಳ್ಳೆ ಹಮ್ಮೂಸ್ ಮಾರುವ ಅಂಗಡಿ ಗೊತ್ತು!" ಸೂರ್ಯನ ಕಿರಣಗಳಿಂದ ಕಂಚಿನ ಬಣ್ಣದಲ್ಲಿ ತೊಯ್ದಾಡುತ್ತಿದ್ದ ಗೆಲಿಲಿಯ ಹುಲ್ಲುಗಾವಲುಗಳ ನಡೆದು ಹೋದೆವು. ನಾವಿಬ್ಬರೂ ಒಟ್ಟಿಗೆ ಪೂರ್ವ ಮತ್ತು ಪಶ್ಚಿಮದ ಜೆರುಸುಲೇಮ್ನಲ್ಲಿ ಅಲೆದಾಡಿದ್ದೇವೆ. ಗಾಯಗೊಂಡಿದ್ದರೂ ಕಲ್ಲು ಹೃದಯದಂತ ಈ ಹಳೆ ನಗರದಲ್ಲಿ ಸುತ್ತಿದ್ದೇವೆ. ಆತ ಆಗಾಗ ಹಾಡುತ್ತಲೆ ಇರುತ್ತಿದ್ದ. ಅವನ ಸಂಗೀತ ಜ್ಞಾನ ಅಕ್ಷಯ ಪಾತ್ರೆಯಂತೆ. ಸ್ವಾಭಾವಿಕ, ಬಹುಭಾಷಾ ವಿಷಾರದ. ವಿಷಣ್ಣತೆಯ ಭಾವದಲ್ಲಿ ಹಾಡುತ್ತಿದ್ದ ಅವನ ಲಾವಣಿಗಳಲ್ಲಿ ನಶಿಸಿ ಹೋದ ಉತ್ತರದ ಪರ್ವತಗಳ ಭೂದೃಶ್ಯಗಳ ಸ್ಮರಣೆ ಇತ್ತು.
Yuval Ben-Ami sings a rambling song. Mt. Carmel, Israel.
Paul Salopek
ನಾವು ಆದಿ ಮಾನವರು ವಿಕಾಸ ಹೊಂದಿರಬಹುದಾಂತ ಗುಹೆಗಳತ್ತ ಸರಿಯುತ್ತಿದ್ದೆವು. ಮೊದಲ ಮಾನವರು ಬೆಂಕಿ ಗೂಡನ್ನು ಕಟ್ಟಿದ್ದ ಗುಹಾಶ್ರಯಕ್ಕೆ ತೆರಳುತ್ತಿದ್ದೆವು, ಬಂಜರು ಭೂಮಿಯ ಜಿಂಕೆಗಳನ್ನು ಬೇಟೆಯಾಡುತ್ತಿದ್ದಂತ ಸ್ಥಳ, ಮುಂದೊಂದು ದಿನ ಮೆಡಿಟರೇನಿಯನ್ ಎಂದು ಕರೆಸಿಕೊಳ್ಳುವಂತ ಹೆಸರಿರದ ನೀಲಿ ಸಮುದ್ರವನ್ನು ದೃಷ್ಟಿಸುತ್ತಾ. ಆ ಸ್ಥಳದಿಂದ ಮುಂದಕ್ಕೆ, ನೀರಿನ ಚಿಲುಮೆಗಳಿಂದ ಕಾಡಿನ ಆಹಾರದಿಂದ ಸಮೃದ್ಧವಾಗಿತ್ತು, ಮುಂದುವರೆಯಲು ಶ್ರಮಿಸಿದ್ದಾರೆ, ಇಂಚಿಂಚು, ಒಂದು ಪೀಳಿಗೆಗೆ ಸರಾಸರಿ ಹತ್ತು ಮೈಲಿಯಿರಬಹುದು, ಈ ಭೂಮಿಯನ್ನು ಆವರಿಸಲು. ಅಥವ ಆಫ್ರಿಕಾಗೆ ಹಿಂದಿರುಗಿರಬಹುದು. ಯಾರೂ ಏನನ್ನು ಹೇಳಲಿಕ್ಕಾಗುವುದಿಲ್ಲ. ಈ ಅದ್ಭುತ ಹೋಮೋಸೇಪಿಯನ್ ಗಳು ಇಂದಿನ ಪವಿತ್ರ ನೆಲದಿಂದ ಹಾಗೆಯೇ ನಾಮಾವಶೇಷರಾದರೆಂದು ಪಳೆಯುಳಿಕೆಗಳ ದಾಖಲೆಗಳು ತಿಳಿಸುತ್ತವೆ. ಅಥವ ಹಳದಿ ಲಿವ್ಯಾಂಟೈನ್ ಬೆಟ್ಟಗಳ ಮೇಲೆ ಬೇಟೆಯಾಡುತ್ತಿದ್ದ ನಿಯಾಂಡರ್ಥಾಲ್ಗಳನ್ನು ಭೇಟಿಯಾಗಿರಬಹುದು. ಎರಡು ಹೋಮಿನಿಡ್ ಜೀವಿಗಳು ಬೆರೆತಿರಬಹುದು, ಶಾಂತಿಯುತವಾಗಿ ತಳಿಮಿಶ್ರಿತವಾಗಿರಬಹುದು, ಹೊಸ ತಳಿಯೊಂದು ಉತ್ಪತ್ತಿಯಾಗಿರಬಹುದು. ಅಥವ ಪರಸ್ಪರ ಹೊಡೆದಾಡಿಕೊಂಡು ನಾಶವಾಗಿರಬಹುದು. ಒಂದೇ ಕಾಲದ ದಿಗಂತದಲ್ಲಿ ಮೌಂಟ್ ಕಾರ್ಮೆಲ್ನ ಗುಹೆಗಳ ಧೂಳಿನಡಿಯಲ್ಲಿ ಎರಡೂ ಜೀವಿಗಳು ಮಣ್ಣಾಗಿದ್ದಾರೆ. (ಈ ಪದರ 80,000 ದಿಂದ 100,000 ವರ್ಷಗಳಷ್ಟು ಹಳೆಯದು.) ಆದರೆ ಹತ್ತಾರು ಸಾವಿರ ವರ್ಷಗಳಷ್ಟು ಹಿಂದೆಯೆ ಮಾನವ ಜೀವಿಗಳು ಕಣ್ಮರೆಯಾಗಿದ್ದಾರೆ. ಅದೃಶ್ಯರಾಗಿದ್ದಾರೆ. ಕಳೆದು ಹೋದ ಪ್ರಕರಣವಿರಬಹುದು. ಒಂದು ಚಿನ್ಹೆ. ಮಾನವ ಕುಲದ ಕವಲು ದಾರಿಯ ಕಷ್ಟಗಳ ಸರಮಾಲೆಯ ಮುನ್ಸೂಚಿಯಂತೆ.
ಒಮ್ಮೆ, ಓಫರ್ ಬಾರ್-ಯುಸೆಫ್, ಎಂಬ ಪ್ರಾಚೀನ ಮಾನವನ ವಲಸೆಗಳ ಬಗ್ಗೆ ಅಧ್ಯಯನ ಮಾಡಿರುವ ಸರ್ವೋತ್ಕೃಷ್ಟ ತಜ್ಞನನ್ನು ಕೇಳಿದೆ, ಮೌಂಟ್ ಕಾರ್ಮೆಲ್ನಲ್ಲಿ ಬಹಳ ಹಿಂದೆ ನಿಯಂಡರ್ಥಾಲ್ಗಳು ಮತ್ತು ಮಾನವರ ನಡುವೆ ಏನಾಗಿರಬಹುದೆಂದು. ಆ ವಿಜ್ಞಾನಿ ನಾನೊಬ್ಬ ಮೂರ್ಖನಂತೆ ನನ್ನ ಕಡೆ ನೋಡಿದ.
“ನೋಡು ಇಂದು ಏನು ನಡೆಯುತ್ತಿದೆ!” ಆತ ಹೇಳಿದ. ಇಂಥದೊಂದು ಪ್ರಶ್ನೆಗೆ ಕನಿಕರದಿಂದ ಆತ ತಲೆಯಲ್ಲಾಡಿಸಿದ. “ಏನೆಂದು ಯೋಚಿಸಿದ್ದೀಯ?" ನಾವೇನು ಅವರ ಕೈ ಹಿಡಿದಿದ್ದೇವೆಯೆ? ಪ್ರೀತಿಯಿಂದ ನಾವು ಅವುಗಳನ್ನು ಕೊಂದಿದ್ದೇವೆಯೆ?”
ಬೆನ್-ಅಮಿ ಮತ್ತು ನಾನು ಕೊನೆಗೂ ಗುಹೆಗಳಿರುವ ಸ್ಥಳಕ್ಕೆ ಬಿರುಗಾಳಿಯಂತೆ ತಲುಪಿದೆವು.
ಸಂಜೆಯಾಗಿತ್ತು. ಸರ್ಕಾರ, ಗುಹೆಗಳಲ್ಲಿ ಪ್ರಾಚೀನ ಮಾನವರ ಹೋಲಿಕೆಯ ಪ್ರತಿಮೆಗಳನ್ನು ಇಟ್ಟಿತ್ತು. ಗಂಡಸರು ಮತ್ತು ಹೆಂಗಸರು ಚರ್ಮದೊಳಗೆ, ದಟ್ಟ ಕೂದಲುಗಳ ಮಕ್ಕಳುಗಳು. ಅವರು ಪ್ಲಾಸ್ಟರ್ ಕಣ್ಣುಗಳ ಮೂಲಕ ದಿಟ್ಟಿಸುತ್ತಿದ್ದರು. ಹಂಚಿಕೊಳ್ಳಲು ರಹಸ್ಯಗಳೇನು ಇರಲಿಲ್ಲ. ಅವುಗಳ ಮೇಲೆ ಬೀಳುತ್ತಿದ್ದ ಬೆಳಕಿನ ಕಂಬಗಳ ಚಲನೆಯಿಂದ, ನೆರಳುಗಳ ಉತ್ಪತ್ತಿಯಿಂದ ಅವುಗಳು ಚಲಿಸುತ್ತಿರುವಂತೆ ಭಾಸವಾಯಿತು. ಕುಣಿಯುತ್ತಿರುವಂತೆ ಅನಿಸಿತು. ಇಥಿಯೋಪಿಯಾದಿಂದ ನನ್ನ ಪ್ರಯಾಣ ಆರಂಭಿಸಿದಾಗ, ನಿಜವಾದ ಮನುಷ್ಯರು ಕುಣಿದಿದ್ದರು: ಅಫಾರ್ ಅಲೆಮಾರಿಗಳು ಹಾಡುತ್ತಾ ಕಾಲಿನ ಚಡಾವನ್ನು ಸವನ್ನಾದ ಭೂಮಿಗೆ ಕುಟ್ಟುತ್ತಾ, ಶುಭವಾಗಲಿ ಎಂದು ಹಾಡಿದ್ದರು. ಮೇಲ್ನೋಟಕ್ಕೆ ಅವರು ಅನಾಗರೀಕರಂತೆ, ಪ್ರಾಚೀನರಂತೆ ಕಂಡರೂ ನಿಜಕ್ಕೂ ಅವರು ನಾಗರೀಕರು, ಅದ್ಭುತ ಜೀವಿಗಳು. ನಾನೇನಾದರೂ ನಿಯಾಂಡರ್ಥಾಲ್ ಆಗಿದ್ದರೆ ನನ್ನ ಕೂದಲು ನಿಮಿರಿ ನಿಲ್ಲುತ್ತಿತ್ತು. ಅವರ ಉಚ್ಛಾರಣೆಯನ್ನು ಆಲಿಸುತ್ತಿದ್ದೆ. ನನ್ನ ಅಂತ್ಯದ ಸುದ್ದಿ ನನಗೆ ಕೇಳುತ್ತಿತ್ತು.
Cyprus-bound.
Paul Salopek
ಸೈಪ್ರಸ್ನ ಲಿಮಸ್ಸೊಲ್ ಎಂಬಲ್ಲಿಗೆ ಸರಂಜಾಮು ಸಾಗಿಸುತ್ತಿದ್ದ ಎಮ್.ವಿ. ಅಲಿಯೊಸ್ ಎಂಬ ಹಡಗಿನಲ್ಲಿ ಧಗೆಯಿಂದ ಕುದಿಯುತ್ತಿದ್ದ ಕೊಠಡಿಯಲ್ಲಿ ಕುಳಿತು ಇವೆಲ್ಲವನ್ನು ನೆನಪಿಸಿಕೊಳ್ಳುತ್ತಿದ್ದೆ.
ಲೆವೆಂಟನ್ನು ಪರಿತ್ಯಜಿಸಿ ಮುನ್ನಡೆಯುತ್ತಿದ್ದೆ. ಮುಂದಿನ ಉಪಖಂಡಕ್ಕೆ ಕಾಲಿಡುತ್ತಿದ್ದೇನೆ, ಏಷ್ಯಾ ಮೈನರ್ಗೆ. ಅಲ್ಲಿಂದ ಮುಂದೆ ಪೂರ್ವಕ್ಕೆ ಕನಿಷ್ಠವೆಂದರೂ ಎರಡು ವರ್ಷ ನಡೆಯುತ್ತೇನೆ. ಸಿರಿಯಾದಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಮತ್ತು ಇರಾಕ್ ನ ಯುದ್ಧಗಳ ಪರಿಣಾಮ ಅವುಗಳನ್ನು ಹಡಗಿನಲ್ಲಿ ಬಳಸುತ್ತಿದ್ದೇನೆ. ರಾತ್ರಿಯಲ್ಲಿ, ಮೊರೆಯುವ ಹಡಗು ತೆಳುವಾದ ತೆರೆಯ ಗೆರೆಯನ್ನು ಮೂಡಿಸುತ್ತಾ ಎಂದಾದರೂ ಸಿಡಿಯುವಂತೆ ಇರುವ ಟೈಂಬಾಂಬ್ನಂತ ಮಧ್ಯ ಪ್ರಾಚ್ಯದ ನೇರದಿಂದ ಗುರಿಯಿಟ್ಟಂತೆ ಸಾಗುತ್ತಿದೆ. ಸದ್ಯದಲ್ಲೆ, ಕೆಲವು ವಾರಗಳಲ್ಲಿ, ಗಾಜಾ ಸಿಡಿಯುತ್ತದೆ. (ಇಂದಿನವರೆಗೆ ಸತ್ತಿರುವವರ ಸಂಖ್ಯೆ: 1600ರಕ್ಕೂ ಹೆಚ್ಚು ಪ್ಯಾಲೆಸ್ಟೇನಿಯನ್ನರು ಮತ್ತು 60ಕ್ಕೂ ಹೆಚ್ಚು ಇಸ್ರೇಲಿಗಳು.) ಹಡಗಿನ ಕೋಣೆಯ ಕಿಟಕಿಯ ಹೊರಗೆ ದಿಟ್ಟಿಸಿದರೆ ದಟ್ಟವಾದ ಕತ್ತಲು. ಕೊಠಡಿ ಧಗೆಯಿಂದ ಕುದಿಯುತ್ತಿದೆ. ಬಟ್ಟೆಗಳನ್ನೆಲ್ಲಾ ಕಳಚಿ, ಕುಳಿತೆ, ಬೆವರು ಸುರಿಯುತ್ತಿದೆ. ನನಗೆ ನಿದ್ರಿಸಲಾಗಲಿಲ್ಲ.
