"ದಿಗಂತದಲ್ಲಿರುವವೆಲ್ಲಾ ಪರ್ವತಗಳು. ವಿಲಕ್ಷಣ ಬೆಳಕಿನ ತೊಯ್ದಾಟದಲ್ಲಿ ಉಕ್ಕಿನ ಮತ್ತು ನಸುನೀಲಿ ನೆರಳುಗಳು ಹೊಳೆಯುತ್ತವೆ, ಹೊರಮೈರೇಖೆಗಳು ಮತ್ತು ದೃಷ್ಟಿಕೋನಗಳು ಮೊನಚಾಗುತ್ತವೆ. ದಿಕ್ಕು ದೆಸೆಯಿಲ್ಲದೆ ಅಲೆಯುವ ಒಂದೊಂದು ಆಡು, ಒಂಟಿಯಾಗಿ ನಿಂತಿರುವ ಕೆರೊಬ್ ಮರಗಳು, ಸ್ಟೀರಿಯೊ ಸ್ಕೋಪ್ನ ಮೂಲಕ ವೀಕ್ಷಿಸಿದರೆ ಶ್ವೇತ ಭೂಮಿಯಿಂದ ಮೇಲೆದ್ದಂತೆ."
-ರಾಬರ್ಟ್ ಬೈರನ್, “ದಿ ರೋಡ್ ಟು ಆಕ್ಸಿಯಾನ”
ಲಿಮಸ್ಸೊಲ್ ನಲ್ಲಿ ಹಡಗು ನಿಂತಿತು. ಕ್ರೋಮ್ನ ಗಿಲ್ಲೋಟಿನ್ನಂತೆ ಸೂರ್ಯನ ಕಿರಣಗಳು ಬೀಳುತ್ತಿದ್ದವು. ಮಿನುಗುತ್ತಿದ್ದವು. ಮೊನಚು. ಪ್ರಾಣಾಂತಿಕ. ನಾನು ತತ್ತರಿಸಿ ಹೋದೆ, ಕಬ್ಬಿಣದ ಕಟಕಟೆಗಳ ನಡುವೆ ನಡೆದಾಗ ಸಮುದ್ರತೀರವೆಲ್ಲ ರಜೆ ಕಳೆಯುತ್ತಿರುವ ರಷ್ಯನ್ನರಿಂದ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಶೈತ್ಯೀಕರಿಸಿದ ಕಾಫಿ ಪಾನಿಯಗಳನ್ನು ಮಾರುತ್ತಿದ್ದ ಪ್ರತಿ ಮೂಲೆ ಅಂಗಡಿಗಳನ್ನು ದಾಟಿದೆ, ನಯವಾದ ಮಟ್ಟಸವಾದ ರಸ್ತೆಗಳು ಎಲ್ಲೆಲ್ಲೂ. (ಸಿರಿವಂತ ಸಮಾಜದ ಈ ಅನಿವಾರ್ಯ ವೈಶಿಷ್ಟ್ಯಗಳು ಆಫ್ರಿಕಾ ಬಿಟ್ಟನಂತರ ಮೊದಲ ಬಾರಿಗೆ ನನ್ನಲ್ಲಿ ಹೊಪ್ಪಳೆಗಳನ್ನೆಬ್ಬಿಸಿದವು), ಸೈಪ್ರಸ್ ದ್ವೀಪದ ಒಳಹೊಕ್ಕೆ.
Moving inland across one of the planet’s oldest inhabited islands.
Paul Salopek
“ಆರ್ಥಿಕ ಕುಸಿತ” ಎಂದು ಗ್ರೀಕ್ ಸೈಪ್ರಿಯಾಟ್ನ ನನ್ನ ಸ್ನೇಹಿತ ಸವ್ವಾಸ್ ಸಕ್ಕಾದಾಸ್ ಹೇಳಿದ.
ಸವ್ವಾಸ್, ಸೈಪ್ರಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹೋಟೇಲ್ ಮತ್ತು ಪ್ರವಾಸೋದ್ಯಮ ಆಡಳಿತ ಮಂಡಳಿ ವಿಭಾಗದ ಪ್ರಾಧ್ಯಾಪಕ. ಅವನ ಹಳ್ಳಿಯ ನಡುವೆ ಹಾದು ಹೋಗುತ್ತಿದ್ದಾಗ ಅವನ ಮನೆಯ ಮುಂದಿನ ಹುಲ್ಲುಹಾಸನ್ನು ನೇರ್ಪುಗೊಳಿಸುತ್ತಾ ನನ್ನನ್ನು ಗುರುತಿಸಿದ. ಅವನ ಮನೆಯಲ್ಲೆ ತಂಗಲು ಆಹ್ವಾನಿಸಿದ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಆತನ ಪುಟ್ಟ ರಾಷ್ಟ್ರ ದಿವಾಳಿಯೆದ್ದಿದೆ - ಷೇರುಪೇಟೆಯ ವಹಿವಾಟಿನಿಂದ ಸಾಲದ ಪರ್ವತಗಳಲ್ಲಿ ಮುಳುಗಿದೆ ಎಂದು ವರದಿ ಮಾಡಿದ.
“ನಮ್ಮ ಅತ್ಯಂತ ದೊಡ್ಡ ಬ್ಯಾಂಕೊಂದು ಕಳೆದ ವರ್ಷ ವ್ಯಾಪಾರವನ್ನು ಸ್ಥಗಿತಗೊಳಿಸಿತು”. ಎಂದ ಸವ್ವಾಸ್. “ಒಂದು ಮಧ್ಯಾಹ್ನ ನಾವೆಲ್ಲ ಸಾಮಾನ್ಯ ಜೀವನ ನಡೆಸುತ್ತಿದ್ದೆವು. ನಂತರ- ಮರುದಿನ ಬೆಳಿಗ್ಗೆ-ತತ್ತರಿಸಿ ಹೋದೆವು. ಎ.ಟಿ.ಎಮ್.ಗಳ ಮುಂದೆ ಉದ್ದುದ್ದ ಸಾಲುಗಳು. ಜನರು ತಮ್ಮ ಜೀವನದ ಉಳಿತಾಯದ ಹಣವನ್ನೆಲ್ಲಾ ಕಳೆದುಕೊಂಡಿದ್ದರು. ಎಲ್ಲರಿಗೂ ಒಂದು ದಿನಕ್ಕೆ 200 ಯೂರೋ [$243] ಗಳನ್ನು ಮಾತ್ರ ಹಿಂಪಡೆಯಲು ನಿಗದಿಗೊಳಿಸಿದ್ದರು.”
“ಅವರು”, ಯೂರೋಪಿಯನ್ ಯೂನಿಯನ್. ಸೈಪ್ರಸ್ ಅನ್ನು ಸಾಲದಿಂದ ಮುಕ್ತ ಗೊಳಿಸಿದರು.
“ಯು.ಎಸ್.ನಲ್ಲಿ ಪರಿಸ್ಥಿತಿ ಹೇಗಿದೆ.?”
“ಕೆಳಮುಖ.”
“ಅಲ್ಲೂ ಬ್ಯಾಂಕಿನವರನ್ನು ಜೈಲಿಗೆ ಅಟ್ಟುತ್ತಾರೇನು?”
“ಇಲ್ಲ.”
“ಇಲ್ಲೂ ಇಲ್ಲ.”
ನಿಕೋಸ್ ಕಝನ್ಟ್ ಝಾಕಿಸ್ ಬರೆದ ಕಾದಂಬರಿಯ ಒಂದು ಭಾಗ ಮನಸ್ಸಿನಲ್ಲಿ ಮೂಡಿತು: ಜೋ಼ರ್ಬಾ ಮತ್ತು ಗ್ರೀಕ್ ಹೇಗೆ ತಮ್ಮ ಆಹಾರದಿಂದ ಏನು ಮಾಡುತ್ತಾರೆ ಎಂಬುವುದರ ಮೂಲಕ ಮನುಷ್ಯನನ್ನು ಅರ್ಥೈಸಬಹುದು ಎಂದು: ಕೆಲವರು ಅದನ್ನು ಕಲೆಯನ್ನಾಗಿ ಪರಿವರ್ತಿಸುತ್ತಾರೆ, ಇನ್ನೂ ಕೆಲವರು ದೈಹಿಕ ಶ್ರಮವನ್ನಾಗಿ ಪರಿವರ್ತಿಸುತ್ತಾರೆ, ಮತ್ತೆ ಕೆಲವರು ಕೇವಲ ಸಗಣಿಯನ್ನಾಗಿ ಪರಿವರ್ತಿಸುತ್ತಾರೆ. ಇವರು ಬ್ಯಾಂಕರ್ಗಳೆಂದು ಸ್ಪಷ್ಟ.
“ನಾವು ಸೈಪ್ರಸ್ನಲ್ಲಿರುವ ಅತ್ಯಂತ ಹಳೆಯ ಆಲಿವ್ ಮರವನ್ನು ನೋಡಲು ಹೋಗೋಣ,” ಸವ್ವಾಸ್ ನುಡಿದ.
ಇದು 700 ವರ್ಷಗಳ ಹಿಂದೆ ಮೊಳಕೆಯೊಡೆಯಿತು. ಇದರ ಗಂಟುಗಂಟಾಗಿದ್ದ ಕಾಂಡ ವಿಶಾಲವಾಗಿ, ಒಳಗೆ ಟೊಳ್ಳಾಗಿ, ಕುಳಿತಿತ್ತು. ಸವ್ವಾಸ್ ಬಹಳ ಹೆಮ್ಮೆಯಿಂದ ವಿವರಿಸಿದ, ಬಹಳ ಕರಾರುವಕ್ಕಾಗಿ, ಒಂದು ಬಾರಿ “32 ಸಣಕಲು ಫ್ರೆಂಚ್ ಜನರು ಮರದ ಪೊಟರೆಯ ಒಳಗಿದ್ದರು. ಇಂದಿಗೂ ಅದೊಂದು ದಾಖಲೆ”.
ಅನೇಕ ಗ್ರೀಕ್ ಸೈಪ್ರಿಯಾಟ್ ಗಂಡಸರಂತೆ, ಮೆಡಿಟರೇನಿಯನ್ನ ದ್ವೀಪರಾಷ್ಟ್ರಗಳಲ್ಲೆ ಮೂರನೆ ಅತಿ ದೊಡ್ಡ (ಆದರೂ ಬಹಳ ಪುಟ್ಟ) ದ್ವೀಪದಲ್ಲಿ ಸವ್ವಾಸ್ ಚೆಡ್ಡಿಯನ್ನು ಬಿಟ್ಟು ಬೇರೇನೂ ಧರಿಸದೆ ವಾಹನ ಚಲಾಯಿಸುತ್ತಾರೆ. ಬಹಳ ಸ್ವಾಭಾವಿಕ: ಸೈಪ್ರಸ್ನ ಬೇಸಿಗೆಯ ಬಿಸಿ ಉಸಿರುಗಟ್ಟಿಸುತ್ತದೆ, ಧಗಧಗಿಸುತ್ತದೆ, ಸಹಿಸಲಸಾಧ್ಯ. ಆದರೆ ಈ ಅರೆ ಬೆತ್ತಲೆ ವಾಹನ ಚಾಲಕರ ದೃಶ್ಯ ಎದೆಗುಂದಿಸುತ್ತದೆ. ಯಂತ್ರಗಳ ವಿರುದ್ಧ ಇಂಥ ದುರ್ಬಲ ಮಾನವರ ಬೆತ್ತಲೆತನ, ನಮ್ಮ ಯುವ ಪೀಳಿಗೆಯ ಒಡನಾಟ, ತೀವ್ರವಾಗಿ ಘಾಸಿಗೊಂಡಿರುವುದನ್ನು, ಆಧುನಿಕತೆಯ ತೆಳುಭಾವವನ್ನು ಬಿಂಬಿಸುತ್ತದೆ. ನಾವು ಟೊಯೊಟಾ ಪಿಕಪ್ ಟ್ರಕ್ಗಳ ಒಳಗೆ ಬಂಧಿಗಳಾಗಿರುವ ಶಿಲಾಯುಗದ ಜನರು.
Stone Age fashion: topless driving. Savvas Sakkadas at the wheel.
Paul Salopek
ಸೈಪ್ರಸ್ನ ಜೀವತಳಿಯನ್ನು ಗಮನಿಸಿದರೆ ಇದು ನಿಜ ಎಂದು ಭಾವನೆ.
ಸೈಪ್ರಸ್, ಈ ಭೂಗ್ರಹದಲ್ಲೆ ಅತ್ಯಂತ ಪ್ರಾಚೀನ ಕಾಲದ ನೆಲೆಸಿದ್ದ ದ್ವೀಪಗಳಲ್ಲಿ ಒಂದು. ಬೇಟೆಗಾರರು-ಸಂಗ್ರಹಕಾರರು 12000 ವರ್ಷಗಳ ಹಿಂದೆಯೆ ಇಲ್ಲಿಗೆ ಹೇಗೋ ತಲುಪಿದ್ದಾರೆ. ಇಲ್ಲಿದ್ದ ಕುಬ್ಜ ಆನೆಗಳನ್ನು ಮತ್ತು ನೀರಾನೆಗಳನ್ನು ಸುಟ್ಟು ತಿಂದು ಅವುಗಳನ್ನು ಅವನತಿಗೊಳಿಸಿದ್ದಾರೆ ಮತ್ತು ನಂತರ ಪ್ರಪಂಚದ ಮೊದಲ ಹಳ್ಳಿಗಳನ್ನು ಕಂಡುಕೊಳ್ಳಲು ಕಾರಣರಾಗಿದ್ದಾರೆ. ಒಂದು, ಕಾಯಿರೊಕೊಯಿಷಿಯ, 9000ವರ್ಷಗಳಷ್ಟು ಹಳೆಯದಾದ ದುಂಡು ಮನೆಗಳು ಇರುವುದು ಇದರ ವೈಶಿಷ್ಟ್ಯ. ನೋಡಲು ಅವು ಆಧುನಿಕ ರಿಸಾರ್ಟ್ ಬಂಗಲೆಗಳೆಂಬಂತೆ ಬೆರಗುಗೊಳಿಸುತ್ತವೆ. ನಂತರ ಹಿಂಬಾಲಿಸಿದ್ದು ಬೆಚ್ಚಿಬೀಳುವಂತ ಅತಿಕ್ರಮಣಕಾರರ ಮೆರವಣಿಗೆಯ ಸಾಲು ಸಾಲು. ಸೈಪ್ರಸ್ನ ನೈಸರ್ಗಿಕ ತಾಮ್ರ ಸಂಪತ್ತನ್ನು ಕೊಳ್ಳೆಹೊಡೆಯಲು ಪುರಾತನ ಈಜಿಪ್ಷ್ಟಿಯನ್ನರು ತೀರಕ್ಕೆ ನುಗ್ಗಿದ್ದಾರೆ, ನಂತರ ಬಂದವರು ಮೂಲ ಗ್ರೀಕರು, ಫಿನಿಷಿಯನ್ನರು, ಅಸ್ಸಿರಿಯನ್ನರು, ಪರ್ಷಿಯನ್ನರು, ರೋಮನ್ನರು, ಬೈಜೆಂಟಿನಿಗಳು, ಅರಬ್ಬರು, ಕ್ರೈಸ್ಥ ದಂಡಯಾತ್ರಿಗಳು, ಓಟೊಮನ್ನರು, ಬ್ರಿಟಿಷ್ ಚಕ್ರಾಧಿಪತ್ಯ ಮತ್ತು ಅಂತಿಮವಾಗಿ ಬ್ಯಾಂಕರ್ ಗಳು.
Reconstructed Neolithic shelters at Choirokoitia. The first interiors had no corners.
Paul Salopek
ಒಂದು ವಾರ ಉತ್ತರಕ್ಕೆ ನಡೆಯುತ್ತೇನೆ. ಟರ್ಕಿಯಿಂದ ಆಕ್ರಮಿಸಲ್ಪಟ್ಟ ದ್ವೀಪಭಾಗದೆಡೆಗೆ, 1974ರಲ್ಲಿ ಟರ್ಕಿ ಸೈನ್ಯ ಈ ಭಾಗವನ್ನು ಆಕ್ರಮಿಸಿದೆ, ಅಲ್ಲಿಂದ ಟರ್ಕಿಗೆ ನನ್ನ ಸಮುದ್ರ ಪ್ರಯಾಣ. ಅದೃಶ್ಯವಾಗಿರುವ ಸಿಲ್ಕ್ ರಸ್ತೆಗಳು ಅಲ್ಲಿಂದ ಚೀನಾಗೆ ಮುಂದುವರೆಯುತ್ತವೆ.
ಸೈಪ್ರಸ್ನ ಒಳನಾಡಿನಲ್ಲಿ ಭೂತಕಾರದ ಬೆಟ್ಟಗಳಿವೆ. ನಾನು ಅಂಚಿನಲ್ಲಿ ನಡೆಯುತ್ತೇನೆ. ಬಿಸಿಲಿಗೆ ಸುಟ್ಟ ಚರ್ಮದ ಕಂಚಿನ ಬಣ್ಣದ ಪಾಳು ಬಿದ್ದ ಬಂಜರು ಭೂಮಿಗಳಲ್ಲೇ ನಡೆಯುತ್ತಾ ಪಟ್ಟಣಗಳ ವಿರುದ್ಧ ದಿಕ್ಕಿನಲ್ಲಿ ದಿಕ್ಸೂಚಿಗಳ ಮಾಪನ ತೆಗೆದುಕೊಳ್ಳುತ್ತೇನೆ. ನಾನು ಕಾರ್ಟಿಸಿಯನ್ ಸಮೀಕರಣದ ವ್ಯವಸಾಯ ಪ್ರಪಂಚವನ್ನು ನಿರ್ಲಕ್ಷಿಸುವೆ: ಕಾಲುವೆಗಳು, ಅಚ್ಚುಕಟ್ಟಾದ ರಸ್ತೆಗಳು, ನೇರ ಕೋನಗಳು. ಹಕ್ಕಿಗಳು ಹಾರುವ ರೀತಿ ದಾರಿಯಲ್ಲಿ ನಡೆಯುತ್ತೇನೆ. ಬರೆ ಹಕ್ಕಿಗಳಷ್ಟನ್ನೆ ನೋಡಿದೆ: ಹೊಳೆಯುತ್ತಿದ್ದ ಕಪ್ಪು ಕಾಗೆಗಳು. ಈ ದ್ವೀಪ ನಮಗೆ ಸೇರಿದ್ದು. ನಾನು ಮತ್ತು ಈ ಕಾಗೆಗಳು ಸೈಪ್ರಸ್ನ ಮೇಲೆ ಅಧಿಪತ್ಯ ಸ್ಥಾಪಿಸುತ್ತೇವೆ.
ನನ್ನ ಈ ಪ್ರಯಾಣದ ಪಥದಲ್ಲಿ - ಒಂದು ಯುದ್ಧವನ್ನು ಪ್ಯಾಲೆಸ್ಟೇನ್ ನಲ್ಲಿ ಹಿಂದೆ ಬಿಟ್ಟು ಇರಾಕ್ನಲ್ಲಿ ನಡೆಯುತ್ತಿರುವ ಯುದ್ಧದೆಡೆಗೆ ಇಂಚಿಂಚು ಕ್ರಮಿಸುತ್ತಿರುವಾಗ - ಒಂದೆ ಒಂದು ಜೀವಾತ್ಮವನ್ನು ಸಹ ಈ ಪ್ರಯಾಣದಲ್ಲಿ ಎದುರುಗೊಳ್ಳಲಿಲ್ಲ. 150 ಕಿ.ಮೀ. ದೂರ ನಾನೊಬ್ಬನೆ ನಡಿಗೆಯಲ್ಲೇ ಚಲಿಸುತ್ತಿದ್ದ ವಸ್ತು. ಹೀಗಿತ್ತು ಯುರೋಪ್ನ ಆಂತರಿಕ ಒಂಟಿತನ. ಸೂಜಿಯ ಕಣ್ಣಿನಲ್ಲಿ ಎಳೆಯುವ ದಾರದಂತೆ ನನ್ನ ಹೃದಯದ ಮೂಲಕ ಪ್ರಪಂಚವನ್ನು ಎಳೆಯುತ್ತಿದ್ದೇನೆ. ನನ್ನ ಹಿಂದೆ ಅನಾವರಣಗೊಳ್ಳುವುದನ್ನು ಗಮನಿಸುತ್ತಿದ್ದೇನೆ. ನನ್ನ ಅಂಗಿಯನ್ನು ಬಿಚ್ಚೆಸೆದೆ. ನಾನೀಗ ಸ್ವತಂತ್ರ.
