“ಮತ್ತೊಂದು ಬಾರಿ, ನೀ ಹೇಳು ನನಗೆ," ಸೆಲ್ ಫ಼ೋನಲ್ಲಿ ಗೊಂದಲಗೊಂಡಿದ್ದ ಧ್ವನಿಯೊಂದು ಹೇಳಿತು. "ಕತ್ತೆಯೊಂದನ್ನು ಜಾರ್ಜಿಯಾದೊಳಗೆ ತರಲು ಬಯಸುತ್ತಿದ್ದೀಯಾ?”
“ಇಲ್ಲ - ಸರಕುಸಾಗಿಸುವ ಹೇಸರಗತ್ತೆ.”
ಹೇಸರಗತ್ತೆ?”
“ನಿನಗೆ ಗೊತ್ತಲ್ಲ - ಕುದುರೆಯನ್ನು ಕತ್ತೆಯೊಂದಿಗೆ ಕೂಡಿದಾಗ.”
“ನನಗೆ ಗೊತ್ತು ಹೇಸರಗತ್ತೆಯೆಂದರೇನು ಎಂದು.”
ಅದು ನಿಕಾ ಜು಼ರಾಶ್ವಿಲಿ.
ನಿಕಾ - ನನ್ನ ಸಹೋದ್ಯೋಗಿಯ ಸ್ನೇಹಿತರಲ್ಲಿ ನೌಕರಿಯಲ್ಲಿರುವಾತ, ಜಾರ್ಜಿಯಾದ ರಾಜಧಾನಿ ದೂರದ ಟಿಬಿಲಿಸಿಯಲ್ಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಜಾರ್ಜಿಯಾದ ನಿರ್ದೇಶಕರಾದ ಈತನ ಯಜಮಾನ ಡೇವಿಡ್ ಲಾರ್ಡಕಿಪನಿಡ್ಜೆಯವರ ಅಪ್ಪಣೆಯ ಮೇರೆಗೆ, ಮತ್ತು ಅಮೇರಿಕಾದಲ್ಲಿ ಜಾರ್ಜಿಯಾದ ರಾಯಭಾರಿಯಾಗಿರುವ ಶ್ರೀಮನ್ ಆರ್ಕಿಲ್ ಜೆಗೆಶಿಡ್ಜೆಯವರ ವಿನಂತಿಯ ಮೇರೆಗೆ ಮತ್ತೊ ವಾಷಿಂಗ್ಟನ್, ಡಿ. ಸಿ. ಯಲ್ಲಿನ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿ ಯವರ ವಿನೀತಪೂರ್ಣ ಒತ್ತಾಯದ ಮೇರೆಗೆ ನಿಕಾ ನ ಮೇಲೆ ಬಹಳ ಸೂಕ್ಷ್ಮವಾದ ಮತ್ತು ವಿಶೇಷವಾದ ಕೆಲಸವನ್ನು ಹೊರಿಸಲಾಗಿದೆ: ಅದೇನೆಂದರೆ ಟರ್ಕಿಯಿಂದ ಜಾರ್ಜಿಯಾದ ಗಣರಾಜ್ಯಕ್ಕೆ ಹೆಣ್ಣು ಹೇಸರಕತ್ತೆ ಕಿರ್ಕಾತಿರ್ಳನ್ನು ಸುಗಮವಾಗಿ ವಲಸೆ ಮಾಡಿಸುವುದು. ನಿಕಾ ಒಬ್ಬ ವಕೀಲ. ಆತ ಒಬ್ಬ ನುರಿತ ಸರಕು ಸಾಗಾಣೆದಾರ. ಸಮಸ್ಯೆಗಳನ್ನು ಬಗೆಹರಿಸುವವನು. ತೊಂದರೆಗಳನ್ನು ನಿವಾರಿಸುವವನು. ಏನನ್ನಾದರೂ ಸರಿಪಡಿಸುವವನು, ಯಾವುದೆ ಪರಿಸ್ಥಿತಿಯನ್ನು ನಿಭಾಯಿಸುವವನು, ಕೆಲಸಗಳನ್ನು ಸುಲಭಗೊಳಿಸುವವನು, ಸೃಜನಶೀಲ ವ್ಯಕ್ತಿತ್ವವುಳ್ಳ ಮನುಷ್ಯ. “ಮತ್ತೆ ನಿನಗೆ ಕರೆ ಮಾಡುತ್ತೇನೆ.” ಎಂದು ನಗುತ್ತಾ ತಿಳಿಸಿದ. ಕೆಲವು ದಿನಗಳ ನಂತರ ಹಾಗೆ ಮಾಡಿದ. ಟರ್ಕಿಯಲ್ಲಿನ ಕಾಕಸಸ್ ಪರ್ವತಗಳ ಹಿಮ ಮುಸುಕಿದ ರಸ್ತೆ ಬದಿಯಲ್ಲಿದ್ದಾಗ ನನ್ನ ಫೋನ್ ರಿಂಗಣಿಸಿತು, ನಿಕಾ ನಿಟ್ಟುಸಿರುಬಿಟ್ಟ. ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದಾನೆ. ಆತ ಅಧಿಕಾರಿಗಳನ್ನು ಪೀಡಿಸಿದ್ದಾನೆ. ರಾಜಕಾರಣಿಗಳ ಜತೆ ಸಿಹಿಯಾಗಿ ಮಾತನಾಡಿದ್ದಾನೆ. ಆದರೆ ಕಾನೂನು ಕಟ್ಟಳೆಗಳಿವೆ. ಪಶುವೈದ್ಯಕೀಯಕ್ಕೆ ಸಂಬಂಧಿಸಿದ ನಿಯಂತ್ರಣಗಳು. ಸಂಪರ್ಕ ನಿಷೇದಗಳು, “ದಯವಿಟ್ಟು ನನ್ನನ್ನು ಕ್ಷಮಿಸು,” ಎಂದು ಹೇಳಿದ. "ಪ್ರಾಣಿಯನ್ನು ಸಾಗಿಸುವುದು ಸಾಧ್ಯವಿಲ್ಲ.”
ಹಾಗಾಗಿ ನನ್ನ ಹೇಸರಗತ್ತೆಯನ್ನು ಕೊಟ್ಟುಬಿಡಬೇಕು.
ಕಿರ್ಕಾತಿರ್: ಬಹಳ ವಿಶ್ವಸನೀಯ ಆತ್ಮದ ಪ್ರಾಣಿ, ಧೃಢತೆಯ, ಆಕ್ಷೇಪಣೆ ವ್ಯಕ್ತಪಡಿಸದ, ಘನಗಂಭೀರದ, ಉಬ್ಬುಹಲ್ಲಿನ ಸದ್ಗುಣ ಸಂಪನ್ನ, ಆದರೆ ಪ್ಯಾಕ್ ಮಾಡಲ್ಪಟ್ಟ ಕುರುಕಲು ತಿಂಡಿಗಳ ಮೇಲೆ ದೌರ್ಬಲ್ಯ. ಸತ್ಯ, ಆಕೆಯೇನೋ ತರುಣಿ ಹೇಸರಗತ್ತೆಯೇನೂ ಅಲ್ಲ. ರಬ್ಬರಿನಂತ ಆಕೆಯ ತುಟಿಗಳು ಸುರುಟಿಕೊಂಡು ಇಳಿಬಿದ್ದಿದ್ದವು, ಕಲ್ಲಿನ ಹಾದಿಯ ಮೇಲೆ ಅದರ ಗೊರಸುಗಳ ಸದ್ದು ನಿಧಾನಗತಿಯಲ್ಲಿತ್ತು. ಆದರೆ ಆಕೆ ಬಹಳ ವಿವೇಕವುಳ್ಳವಳು. ಮೂರ್ಖಳಂತೇನೂ ಆಡುತ್ತಿರಲಿಲ್ಲ. ಮತ್ತು ಹುಟ್ಟು ಪ್ರಯಾಣಿಕಳಂತೆ, ಮುಕ್ತ ರಸ್ತೆಯ ಎಲ್ಲ ತಂತ್ರಗಳನ್ನು ಬಲ್ಲವಳು. ಸುಡುವ ಬಿಸಿಲಿನಲ್ಲಿ ನಡೆಯುವಾಗ ನೆರಳು ಕಂಡಕಡೆ ಧಾವಿಸಿ ನಿಲ್ಲುತ್ತಾಳೆ, ದೀರ್ಘ ಪ್ರಯಾಣದ ನಿಯಮವನ್ನು ಪಾಲಿಸುತ್ತಾಳೆ: ಯಾವಾಗಲೂ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು (ಮಳೆ ಬರಲಿ, ಬಿಸಿಲಿರಲಿ, ದಣಿವರಿಯದೆ ತಿನ್ನುತ್ತಲೇ ಇರುವುದು, ಸತತವಾಗಿ, ಬೇಕಾದರೆ ತಲೆಕೆಟ್ಟಂತೆ ಎಂದೂ ಹೇಳಬಹುದು: ಆಕೆ ಒಂದು ಅಡಿ ಹಿಮದಡಿ ಹುದುಗಿದ್ದ ಚಳಿಗಾಲದ ಹುಲ್ಲನ್ನು ಅಗೆದು ತಿನ್ನುವುದನ್ನೂ ನೋಡಿದ್ದೆ.) ಅಗಾಧ ವಿಸ್ತಾರದ ಟರ್ಕಿಯ ಪ್ರಯಾಣದುದ್ದಕ್ಕೂ ಆಕೆ ನನ್ನ ಮೌನ ಸಂಗಾತಿಯಾಗಿದ್ದಳು. ಇತಿಹಾಸದಲ್ಲಿ ದ್ವಂಸಗೊಳಪಟ್ಟ ಏಷ್ಯಾಮೈನರ್ನ ಕೆಂಪು ಧೂಳಿನಿಂದ ಉಧ್ಭವಿಸಿದ ಯಾವುದರ ಮೇಲೂ ಆಸ್ಥೆಯಿರದ ಪ್ರಾಣಿ. ಬದಲಾಗದ ಈ ಪ್ರಪಂಚದ ಸುಂದರ ದೃಶ್ಯಗಳು ಆಕೆಯ ಕಪ್ಪು ಕಣ್ಣುಗಳನೇನ್ನೂ ಮೆಚ್ಚಿಸಿರಲಿಲ್ಲ: ದಟ್ಟ ಹಸಿರಿನ ದ್ರಾಕ್ಷಿ ತೋಟದ ಸಾಲುಗಳು, ಕಂದು ಬಣ್ಣದ ಬಾಗಿದ ಯೂಫ್ರೆಟಿಸ್ ನದಿ, ಕಾಕಸಸ್ ಪರ್ವತಗಳ ಹೊಳೆಯುವ ಹಿಮಾಗ್ರಗಳು. ಐದು ತಿಂಗಳುಗಳ ಪ್ರತಿಯೊಂದು ಸೂರ್ಯೋದಯದಲ್ಲಿ - ಅದು ಮಸೀದಿ ಇರಬಹುದು, ಅಥವ ಕಲ್ಲಿನ ಗುಡಿಸಲಿರಬಹುದು, ಅಥವ ಪಿಸ್ಟಾಚಿಯೊ ಮರಗಳ ಕೆಳಗಿನ ಶಿಬಿರಗಳಾಗಿರಬಹುದು - ನಾನೊಂದು ಪದ್ಧತಿಯನ್ನು ಪಾಲಿಸುತ್ತಿದ್ದೆ: ನಿದ್ದೆಗಣ್ಣಿನಲ್ಲೇ ಕಿರ್ಕಾತಿರ್ನತ್ತ ದೃಷ್ಟಿ ಹಾಯಿಸುತ್ತಿದ್ದೆ. ಈ ನೈಸರ್ಗಿಕ ನೆಲೆ ಹಿನ್ನೆಲೆಯಲ್ಲಿ ಅವಳನ್ನು ಗೂಟ ಹೊಡೆದು ಕಟ್ಟಿಹಾಕಿರುವುದನ್ನು ನೋಡಿ ನಾನು ನಿರುಮ್ಮುಳದಿಂದ ಇರುತ್ತಿದ್ದೆ. ಆಕೆ ನನ್ನನ್ನೂ ಈ ಅನಾಟೋಲಿಯಕ್ಕೆ ಕಟ್ಟಿ ಹಾಕಿದ್ದಳು. ನಾನೊಂದು ರೀತಿಯ ಸ್ತಬ್ಧ ಜೀವದಂತೆ ಈ ಹೇಸರಗತ್ತೆಯೊಡನೆ ಜೀವಿಸುತ್ತಿದ್ದೆ.
Murat Yazar and Kirkatir bonding in the Lesser Caucasus mountains.
Paul Salopek
ಆದರೂ ಆಕೆ ಯಾರಿಗೂ ಬೇಡ!
ಮೈಲುಗಳು ಉರುಳಿದವು. ದಿನಗಳು ಕಳೆದು ವಾರಗಳಾದವು. ಜಾರ್ಜಿಯಾದ ಗಡಿಭಾಗ ಅಸ್ಪಷ್ಟವಾಗಿ ಕಾಣಲಾರಂಭಿಸಿತು. ನಾನು ಕರ್ಡ್ ಜನಾಂಗದವರನ್ನು ವಿಚಾರಿಸಿದೆ. ತುರ್ಕರು ಮತ್ತು ಅಜೀರಿ ಜನಾಂಗದವರನ್ನೂ ನಾನು ಕೇಳಿದೆ. “ನಾವು ಇಲ್ಲಿ ಹೇಸರಗತ್ತೆಯನ್ನು ಉಪಯೋಗಿಸುವುದಿಲ್ಲ” ಎಂದು ಹಳ್ಳಿಗರು ಹುಬ್ಬು ಹಾರಿಸುತ್ತಾ ಹೇಳಿದರು. ಗ್ರಾಮೀಣ ಭಾಗದ ಜನರು ಈಗ ಟ್ರಾಕ್ಟರ್ ಗಳನ್ನು ಚಾಲಿಸುತ್ತಾರೆ. ಅವರ ಕೆಲಸ ಉಳಿತಾಯ ಮಾಡುವ ಸಾಧನಗಳು ಡೀಸೆಲ್ ನ್ನು ಉರಿಸುತ್ತವೆ, ಹುಲ್ಲನಲ್ಲ. ಇಂದಿನ ವ್ಯವಸಾಯಗಾರರಿಗೆ ಕೃಷಿ ಪ್ರಾಣಿಗಳ ಅಗತ್ಯವಿರುವುದಿಲ್ಲ.
“ಸರಿಯಾದ ಮನುಷ್ಯನನ್ನು ಹುಡುಕಬೇಕು” ಎಂದು ನನ್ನ ಕರ್ಡಿಷ್ ಮಾರ್ಗದರ್ಶಿ ಮುರಾತ್ ಯಾಜ಼ರ್ ಆತಂಕಿಸುತ್ತಿದ್ದ. “ನಾವು ಅವಳನ್ನು ಹಾಗೆಯೇ ಬಿಟ್ಟು ಬಿಡಲು ಸಾಧ್ಯವಿಲ್ಲ. ತೋಳಗಳು ಅವಳನ್ನು ತಿಂದು ಹಾಕುತ್ತವೆ.”
ಪೂರ್ವೋತ್ತರ ಟರ್ಕಿಯ ಕಡಿಬಂಡೆಗಳ ಸುತ್ತ ಮುತ್ತ ಸುತ್ತಾಡಿದೆವು. ನದಿ ಕಣಿವೆಗಳ ದಂಡೆಯಲ್ಲಿನ ಹಸಿರು ಹೊದಿಕೆಯ ಮೇಲೆ ಚಾರಣಿಸಿದೆವು, ಒಣ ಹುಲ್ಲಿನ ಬಣ್ಣದ ಹುಲ್ಲುಗಾವಲಿನ ನಡುವೆ ಪ್ರಯಾಸದ ಪ್ರಯಾಣ ಮಾಡಿದೆವು, ಅದ್ಭುತವಾದ ಹಿಮಚ್ಛಾದಿತ ಬಯಲಿನಲ್ಲಿ ಕಾಳೆಲೆಯುತ್ತಾ ಸಾಗಿದೆವು, ನಮ್ಮ ಒಂದೆ ಒಂದು ಸರಕನ್ನು ಪಠಿಸುತ್ತಾ: ನಿಮಗೇನಾದರೂ ಒಳ್ಳೆಯ ಹೇಸರಗತ್ತೆಯ ಮೇಲೆ ಆಸಕ್ತಿ ಇದೆಯೆ? ನೀಯತ್ತಾದ ಹೇಸರಗತ್ತೆಯ ಅವಶ್ಯಕತೆಯಿದೆಯೆ? ಮೊದಲ ದರ್ಜೆಯ ಹೇಸರಗತ್ತೆಯನ್ನು ಉಪಯೋಗಿಸುವಿರೇನು?
Two immovable objects: Kirkatir and Che, near Halfeti.
Paul Salopek
ಪೊಸೋಫ್ ನ ಹೊರಗೆ, ಒಬ್ಬ ವಯಸ್ಸಾದ ಕೀರಲು ಮನುಷ್ಯನ ಭೇಟಿಯಾಯಿತು. ಆತ ಸ್ನೇಹಜೀವಿ. ಕುತೂಹಲಕಾರಿ. ಬಡವ. ಕಾಗೆಯಂತೆ ಕಪ್ಪು ದಿರಿಸನ್ನು ತೊಟ್ಟಿದ್ದ. ಮುರಾತ್ ಆತನಿಗೆ ಕತೆಯನ್ನು ಹೇಳಿದ: ನಮ್ಮ ಹೇಸರುಗತ್ತೆ ಎಷ್ಟು ವಿದ್ಯಾವಂತೆ ಎಂದರೆ ಆಕೆ ಕಣ್ಣಿಗೆ ಕನ್ನಡಕ ಧರಿಸಬೇಕಿತ್ತು. ಆಕೆ ಹತ್ತು ಕುಸ್ತಿಪಟುಗಳಷ್ಟು ಬಲಶಾಲಿ. ಆಕೆ ನಿನ್ನ ಅಜ್ಜಿಯಷ್ಟು ಕೋಮಲೆ. ಆಕೆ ಅನಾಟೋಲಿಯದಲ್ಲಿ 700 ಮೈಲಿ ಅಥವಾ ಅದಕ್ಕಿಂತ ಹೆಚ್ಚು ತೀರ್ಥಯಾತ್ರೆಯನ್ನು ಸಂಪೂರ್ಣಗೊಳಿಸಿದ್ದಾಳೆ. ಧಗೆಭರಿತ ಮೆಡಿಟರೇನಿಯನ್ನಿ ನ ಮರ್ಸಿನ್ ನ್ನಿಂದ ಆರಂಭಗೊಂಡಿದ್ದು. ಅಲ್ಲಿ ಅಹಮದ್ ಎಂಬ ಮರಕಡಿಯುವವನಿಂದ ಕೊಂಡುಕೊಂಡಿದ್ದು. ಆತ ಒಬ್ಬ ಅಲೇವಿ, ಆತ ಬಹಳ ಸಹಿಷ್ಣುತೆಯುಳ್ಳ ಇಸ್ಲಾಮಿಕ್ ಮತದಲ್ಲಿ ದಮನಕ್ಕೆ ಒಳಗಾದ ಅಲ್ಪಸಂಖ್ಯಾತ ಒಳಪಂಗಡದ ಸದಸ್ಯ. ಅದು ಮುಕ್ತತೆಗೆ ಹೆಸರುವಾಸಿ, ಮತ್ತು ಅದರ ಕೋಮಿನ ಜೀವನ ಶೈಲಿಗಾಗಿಯೂ ಸಹ.
"ನಾನು ನಿನ್ನ ಹೇಸರಗತ್ತೆಯನ್ನು ತೆಗೆದುಕೊಳ್ಳುತ್ತೇನೆ," ಎಂದು ಘೋಷಿಸಿದ. "ಮತ್ತು ಆಕೆಯನ್ನು ಚೆನ್ನಾಗಿ ಪೋಷಿಸುತ್ತೇನೆ ಎಂದು ಪ್ರಮಾಣಿಸುತ್ತೇನೆ."
End of the trail. Kirkatir boards a truck to her new home on a border farm near Posof.
Murat Yazar
ಮುರಾತ್ ಮತ್ತು ನಾನು ನಿಂತೆವು, ಒಬ್ಬರನ್ನೊಬ್ಬರು ನೋಡಿಕೊಂಡೆವು, ತಲೆಸುತ್ತುತ್ತಿತ್ತು. ಟ್ರಕ್ ನ್ನು ಹತ್ತಿ ಇಳಿದಿದ್ದರಿಂದ ಏದುಸಿರು ಬಿಡುತ್ತಿದ್ದೆವು. ವಯಸ್ಸಾದ ಆ ಮನುಷ್ಯ ತಾನೂ ಒಬ್ಬ ಅಲೇವಿ ಎಂದು ಮತ್ತು ತನ್ನ ಹೆಸರೂ ಸಹ ಅಹಮದ್ ಎಂದು ನಮಗೆ ತಿಳಿಸಿದ. ಬರಡಾಗಿದ್ದ ಈ ಬೆಟ್ಟದ ತುದಿಯಲ್ಲಿ ಕಿರ್ಕಾತಿರ್ನೊಂದಿಗೆ, ನಮ್ಮ ಹಿಂದೆ ಪಶ್ಚಿಮದೆಡೆಗೆ ಬಿಚ್ಚಿ ಹರಡಿಕೊಂಡಿದ್ದ ಟರ್ಕಿ. ನಗಲಿಕ್ಕೆ ಆರಂಭಿಸಿದೆವು ಒಂದು ಜೀವನ ಚಕ್ರ ಪೂರ್ಣಗೊಂಡಿತು.
