ಮೊದಲು ಉತ್ತರಕ್ಕೆ ನಂತರ ಪೂರ್ವಕ್ಕೆ, ಮರುಭೂಮಿಯನ್ನು ತೊರೆದು ಮನುಷ್ಯ ಕೇಂದ್ರಿತವಾದ-- ಆಧುನಿಕ ಸಮಾಜಕ್ಕೆ ಕಾಲೂರಿದೆವು.
ರಸ್ತೆಗಳು ಕಂಡವು: ಜಿಭೂತಿ-ಇಥಿಯೋಪಿಯಾ ಹೆದ್ದಾರಿ ಟ್ರಕ್ಗಳಿಂದ ನೆರೆದಿತ್ತು. ಸಣ್ಣಸಣ್ಣ ಪಟ್ಟಣಗಳ ಮೂಲಕ ಮುಂದುವರೆಯುತ್ತಿದ್ದೆವು. ಧೂಳು ಮತ್ತು ಡೀಸೆಲ್. ಪಾನಗೃಹಗಳು. ಹೊಸಮರದ ಹಲಗೆಗಳಿಂದ ಕೂಡಿದ ಕಿಂಡಿಗಳು. ಬಾಗಿಲಿಗೆ ಕಟ್ಟಿದ ತಗಡಿನ ಲೋಟಗಳ ಹಾರಗಳಿಂದ ಕಿಣಿಕಿಣಿ ಶಬ್ದ.
ನಂತರ, ದುತಿ ಹತ್ತಿರ: ಕಬ್ಬಿನ ಗದ್ದೆಗಳ ಸಮುದ್ರ (ಅಲ್ಲ, ಗೋಡೆ). ಮೈಲುಗಳುದ್ದದ ಕೈಗಾರಿಕಾ ಕೃಷಿ ಭೂಮಿ. ಕಾಲುವೆಗಳು. ಮಾರ್ಗ ಪಲ್ಲಟ ಅಣೆಕಟ್ಟುಗಳು, ನೆಲಸಮ ಮಾಡಿದ ಭೂಮಿ. ನನ್ನ ನಿಷ್ಕಪಟ ಮನಸ್ಸಿನ ಮಾರ್ಗದರ್ಶಿ ಅಹ್ಮದ್ ಅಲೆಮಾ ಹೆಸನ್ ಆಘಾತಕ್ಕೊಳಗಾದಂತೆ ಕಂಡ. ಕಬ್ಬಿನ ಗದ್ದೆಗಳ ಮೂಲಕ ದಾರಿಮಾಡಿಕೊಂಡು ಮುಂದುವರೆದಂತೆ ಕತ್ತಲು ಆವರಿಸಿತು, ಒಂಟೆಗಳನ್ನು ಬೃಹತ್ತಾದ ವೃತ್ತಾಕಾರದಲ್ಲಿ ಕೂರಿಸಿದೆವು. "ಓ ಮ್ಯಾನ್!" ಎಂದ ಅಲೆಮಾ “ಛೇ ಏನಿದು? ಇಷ್ಟೊಂದು ಬದಲಾವಣೆ!” ಎಂದು ಶರಣಾದಂತೆ ಉದ್ಗರಿಸಿದ.
ಇದು ಟೆಂಡಾಹೊ ಕಬ್ಬಿನಗದ್ದೆಗಳ ಬಯಲು, ಅಫಾರ್ ತ್ರಿಕೋನವನ್ನು ಅಭಿವೃದ್ಧಿಗೊಳಿಸುತ್ತಿರುವ ಬಹು ಮಿಲಿಯನ್- ಡಾಲರ್ಗಳ ಇಥಿಯೋಪಿಯಾ-ಇಂಡಿಯಾದ ಯೋಜನೆ. ಸಧ್ಯದಲ್ಲೇ 50,000 ಕ್ಕಿಂತ ಮೇಲ್ಪಟ್ಟು ವಲಸೆ ಕಾರ್ಮಿಕರು ಇಲ್ಲಿ ಜೀವತೇಯುತ್ತಾರೆ. 120,000 ಎಕರೆಯಷ್ಟು ಮರುಭೂಮಿಯ ಪ್ರದೇಶವನ್ನು ಉತ್ತು, ಬಿತ್ತು ಅವಾಷ್ ನದಿಯ ನೀರನ್ನು ಹರಿಸಿ ತೆಗೆದ ಬೆಳೆ ಪ್ರಪಂಚದ ಕಾಫಿ ಮತ್ತು ಟೀಯನ್ನು ಸಿಹಿಗೊಳಿಸಲು ಸಜ್ಜಾಗುತ್ತದೆ. ಅಂತಿಮವಾಗಿ ಈ ಯೋಜನೆ ಇಥಿಯೋಪಿಯಾವನ್ನು ಸಕ್ಕರೆ ಉತ್ಪಾದಿಸುವ ಆರನೇ ದೊಡ್ಡ ರಾಷ್ಟ್ರವನ್ನಾಗಿಸುತ್ತದೆ. ಮತ್ತು ಹೊರ ರಾಷ್ಟ್ರಗಳ ಸಹಾಯಧನದಲ್ಲೇ ಬದುಕುತ್ತಿರುವ ಈ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ನೆರವಾಗುತ್ತದೆ: ಖಂಡಿತಾ ಇದು ಒಳ್ಳೆಯದೇ.
ಆದರೆ ಎಂದಿಗೂ ಅಭಿವೃದ್ಧಿ, ಸಂಬಂಧಪಟ್ಟವರಿಗೆ ಸಮಾನವಾಗಿ ಹಂಚಿಕೆಯಾಗುವುದಿಲ್ಲ. ಇಂತಹ ಅಭಿವೃದ್ಧಿ ಕಾರ್ಯದಲ್ಲಿ ಲಾಭ ಹೊಂದುವವರೂ ಮತ್ತು ಕಳೆದುಕೊಳ್ಳುವವರೂ ಇರುತ್ತಾರೆ. ಇಲ್ಲಿ ಕಳೆದುಕೊಂಡವರಲ್ಲಿ ಒಬ್ಬಳು ಲವಲವಿಕೆಯಿಂದಿದ್ದ ಅಫಾರ್ ಹೆಂಗಸು-ನಿಜವಾಗಿಯೂ ಹುಡುಗಿ. ಆದರೆ ಆಕೆ ನಿಂತ ನಿಲುವು ಮಾತ್ರ ವಯಸ್ಸಾದಂತ್ತಿತ್ತು. ಕೆಂಪನೆ ಬಟ್ಟೆಯುಟ್ಟುಕೊಂಡು ನೀರಿನ ಒಡ್ಡಿನ ಪಕ್ಕ ನಿಂತಿದ್ದಳು. ಪುಟ್ಟ ಕಾಲುವೆಯಲ್ಲಿ ಹರಿಯುತ್ತಿದ್ದ ಅವಾಷ್ ನದಿಯ ನೀರನ್ನು ಮೊಗೆಯುತ್ತಿದ್ದಳು.
ಕಬ್ಬಿನ ಗದ್ದೆಯ ಬಯಲನ್ನು ತೋರಿಸುತ್ತಾ ಅಸಹಾಯಕತೆಯಿಂದ “ಈ ಸಂಸ್ಥೆ ನಮ್ಮ ನೆಲದಿಂದ ನಮ್ಮನ್ನು ಹೊರಹಾಕಿದೆ, ನಮ್ಮ ಅಫಾರ್ ಜನಕ್ಕೆ ಸಿಗುವುದು ಯಾವಾಗಲೂ ಕನಿಷ್ಠ ಕೆಲಸಗಳು, ಒಂದೋ ಕಾವಲು ಕಾಯುವುದು ಅಥವಾ ಮಣ್ಣು ಅಗೆಯುವುದು.”
ಎಲ್ಲಾ ಕಬ್ಬಿನ ಗದ್ದೆಗಳಲ್ಲಿರುವಂತೆ ಸಿಗುವ ಸಂಬಳ ಒಂದು ತಿಂಗಳಿಗೆ 20 ಡಾಲರ್. ಪೋಲಿಸಿನವರು ಬಂದು ಈ ಜಾಗ ಬಿಡುವುದಿಲ್ಲವೆಂದು ವಿರೋಧಿಸುತ್ತಿದ್ದ ಅಲೆಮಾರಿ ಜನಾಂಗವನೆಲ್ಲಾ ಒಕ್ಕಲೆಬ್ಬಿಸಿದರೆಂದು, ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಯವರು ಗಾಯಗೊಂಡರೆಂದು ಈ ಯುವತಿ ತಿಳಿಸಿದಳು.
ಈ ಕಥೆ ಎಷ್ಟು ಹಳೆಯದಿರಬಹುದು? ಇದು ಪ್ರಪಂಚದ ಅತ್ಯಂತ ಹಳೆಯ ಕಥೆಗಳಲ್ಲೊಂದು.
ಚಿನ್ನದ ಗಣಿ ಕೆಲಸದವರಿಗೋಸ್ಕರ ಡಕೋಟಾದ ಬ್ಲಾಕ್ ಹಿಲ್ಸ್ ಮೇಲಿಂದ ತೆರವುಗೊಳಿಸಿದ ಸಿಯೋಕ್ಸ್ ಎಂಬ ಸ್ಥಳೀಯ ಅಮೇರಿಕನ್ ಬುಡಕಟ್ಟಿನವರ ಹೆಸರುಗಳು ಏನಿರಬಹುದು? ಯಾರಿಗೆ ಗೊತ್ತಿದೆ? ತಮ್ಮ ಸಾಂಪ್ರದಾಯಿಕ ಜೀವನ ಶೈಲಿಯನ್ನು ಬಲಿಕೊಟ್ಟವರೆಷ್ಟು ಮಂದಿ - ಅಭಿವೃದ್ಧಿ ಪೋಷಿತ ಮಾರುಕಟ್ಟೆ ನೀತಿಗೋಸ್ಕರ ತಮ್ಮ ವ್ಯವಸಾಯ ಶೈಲಿಯನ್ನು ಬಿಟ್ಟ ಐರಿಷ್ ಬೇಸಾಯಗಾರರಿಬಹುದು, ಹೆದ್ದಾರಿಗೋಸ್ಕರ ತಮ್ಮ ಪಶುಸಂಗೋಪನೆ ಬಿಟ್ಟುಕೊಟ್ಟ ಸ್ಥಳೀಯ ಮೆಕ್ಸಿಕನ್ರಿರಬಹುದು - ಇದೆಲ್ಲಾ ಯಾವ ಘನ ಉದ್ದೇಶಕ್ಕಾಗಿ? ಇಂತಹ ಘಟನೆಗಳ ಲೆಕ್ಕ ಇಡುವುದು ಖಂಡಿತ ಕಷ್ಟ. ಮಾನವೀಯ ಮೌಲ್ಯಗಳನ್ನು ಮರೆಸುವಷ್ಟು ಶರವೇಗದಲ್ಲಿ ಪ್ರಪಂಚ ಬದಲಾಗುತ್ತಿದೆ. ನಮ್ಮ ಯುಗದ ಉಸಿರುಗಟ್ಟಿಸುವಂತಹ ಬದಲಾವಣೆಗಳು ಸಾಮೂಹಿಕ ನೆನಪುಗಳನ್ನು ಅಳಿಸಿಹಾಕುತ್ತಿದೆ. ಆದ್ಯತೆಗಳಿಗೆ ತಡೆಯೊಡ್ಡುತ್ತಿದೆ. ಸಾಮೂಹಿಕ ಕಳಕಳಿಗಳನ್ನು ತುಂಡರಿಸುತ್ತಿದೆ, (ನಮ್ಮನ್ನು ಅಸ್ತವ್ಯಸ್ತಗೊಳಿಸುತ್ತಿರುವ ನಗರ ಸಂಸ್ಕೃತಿ ಏನನ್ನು ಸೂಚಿಸಬಹುದು? ನಮ್ಮ ಅಸ್ತಿತ್ವವನ್ನು ನಿರಾಕರಿಸುವುದರ ಜೊತೆಗೆ ಕಾಲದ ಶೂನ್ಯತೆಯನ್ನು ಸೃಷ್ಟಿಸುತ್ತಿದೆ. ಗತಕಾಲವನ್ನು ಹಂಬಲಿಸುವಂತೆ ಮಾಡುವುದು ಈ ಭೂಪ್ರದೇಶ.)
ದುತಿ, ಈಗ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಹಸಿರಿನ ಸರಹದ್ದು. ಇಥಿಯೋಪಿಯಾದ ಎಲ್ಲೆಡೆಯಿಂದ ಶ್ರಮಪಡುವ ಎಲ್ಲಾ ಗಂಡು ಹೆಣ್ಣುಗಳು ಇಲ್ಲಿ ನೆರೆಯುತ್ತಿದ್ದಾರೆ. ಹೊಸ ಆಶಾ ಭಾವನೆಗಳಿಂದ, ಹೊಸ ರುಚಿಯಿಂದ ಮತ್ತು ಹೊಸ ಧ್ವನಿಗಳಿಂದ ಕೂಡಿದ ಜನಾಂಗ. ಹೊಸ ತೋಟದ ವಸತಿ ಸಂಕೀರ್ಣಗಳು ಮೂರು ಸಾವಿರ ಕುಟುಂಬಗಳಿಗೆ ಆಶ್ರಯ ನೀಡಬಲ್ಲದು. ಬಿಸಿ ಗಾಳಿಯ ಧೂಳಿನ ಮರೆಯಲ್ಲಿ ಕಟ್ಟಡಗಳಿಂದ ದೂರಕ್ಕೆ ಒಬ್ಬ ಅಫಾರ್ ಕುರಿಗಾಹಿ ತನ್ನ ಆಡುಗಳನ್ನು ಓಡಿಸುತ್ತಿದ್ದಾನೆ! ಈ ನೈಸರ್ಗಿಕ ನೆಲೆಯ ಭೂತಕಾಲದ ಪ್ರತಿನಿಧಿಯಂತೆ.
Ethiopian police watch anthropocene video, Afar Triangle.
Paul Salopek
ಟ್ರಕ್ಗಳ ನಿಲುಗಡೆ ಸ್ಥಳವಾದ ಡಿಶೋಟೊ ಎಂಬ ಪಟ್ಟಣದ ಪೋಲಿಸ್ ಠಾಣೆಯಲ್ಲಿ ನನ್ನ ಲ್ಯಾಪ್ ಟಾಪ್ ಅನ್ನು ರೀಚಾರ್ಜ್ ಮಾಡಿಕೊಂಡೆ. ಅಲ್ಲಿದ್ದ ಅಧಿಕಾರಿಗಳು ಅಫಾರ್ನವರಲ್ಲ. ಅವರೆಲ್ಲ ಸ್ನೇಹಜೀವಿಗಳು, ಕುತೂಹಲಿಗಳು ಮತ್ತು ಧಾರಾಳ ವ್ಯಕ್ತಿತ್ವ ಉಳ್ಳವರು. ನನಗೆ ಮತ್ತು ಅಲೆಮಾಗೆ ಸಕ್ಕರೆ ತುಂಬಿದ ಟೀ ಇತ್ತು ಸತ್ಕರಿಸಿದರು. ಇಥಿಯೋಪಿಯನ್ ದೂರದರ್ಶನ ನಮ್ಮನ್ನು ಸಂಭಾಷಣೆಯಿಂದ ದೂರ ಸೆಳೆಯಿತು. ದೂರದರ್ಶನದಲ್ಲಿ ಬರುತ್ತಿದ್ದ ಗಣಿಗಾರಿಕೆಯನ್ನು ಅಭಿವೃದ್ಧಿಪಡಿಸುವ, ಹೆದ್ದಾರಿ ನಿರ್ಮಿಸುವ ಹೊಸ ಸಂಗೀತ ರಾಗ ದೃಶ್ಯಾವಳಿಗಳನ್ನು ದೃಷ್ಠಿಸುತ್ತಾ ಕುಳಿತರು. ಅವರಿಗೆ ಧನ್ಯವಾದ ಹೇಳಿ ನಮ್ಮ ಪ್ರಯಾಣ ಮುಂದುವರೆಸಿದೆವು.
ಜೆಕ್ ಕಾದಂಬರಿಕಾರ ಮಿಲನ್ ಕುಂದೇರಾ ಒಂದೆಡೆ ಬರೆಯುತ್ತಾನೆ: ಅಧಿಕಾರದೊಡಗಿನ ಮಾನವನ ಸಂಘರ್ಷ, ಸ್ಮೃತಿಯು ಮರೆವಿನೊಂದಿಗೆ ನಡೆಸುವ ಸಂಘರ್ಷದಂತೆ, ಸೋಲು ಶತಸಿದ್ದ.
ಆ ಅಫಾರ್ ಹುಡುಗಿಯ ಹೆಸರು ದಹರಾ, ವಯಸ್ಸು 15.
