ನಿಸ್ತೇಜಗೊಂಡಿದ್ದ ಫ್ಲಾಶ್ ಲೈಟ್ನ ಬ್ಯಾಟರಿಗಳು. ಬಿಸಾಡಿದ್ದ ಎರಡು ಇಥಿಯೋಪಿಯನ್ ನಾಣ್ಯಗಳು. ಒಂದು ಹಸಿರು ಪ್ಲಾಸ್ಟಿಕ್ ಬಾಚಣಿಗೆ. ಒಳಚೆಡ್ಡಿ.
ಇಥಿಯೋಪಿಯಾ ಗಡಿಯನ್ನು ತಲುಪಲು ಇನ್ನು ಮೂರುದಿನಗಳ ನಡಿಗೆ ಉಳಿದಿತ್ತು.
To reach the Red Sea—gateway to a new life—migrants cross a merciless plain.
Paul Salopek
ನಾವು ಸಮುದ್ರದಂತಿದ್ದ ಜ್ವಾಲಾಮುಖಿಯ ಬಂಡೆಗಳ ಮೇಲೆ ನಡೆಯುತ್ತಿದ್ದೆವು. ಇದು ಬಿಸಿಯಾಗಿದ್ದ, ಘನಘೋರ,ಅಂತ್ಯವಿಲ್ಲದ ಪ್ರದೇಶ. ಇದ್ದಿಲು ಬಣ್ಣದ ಕಲ್ಲುಗಳ ಕುದಿಯುತ್ತಿರುವ ಬಯಲು. ಜೀವದ ಕುರುಹೂ ಇಲ್ಲದಿರುವ - ಒಂದೇಒಂದು ಗಿಡವೂ ಇಲ್ಲದ ಪ್ರದೇಶ. ಬರಡು ಭೂಮಿಯಂತಿದ್ದ, ಯಂತ್ರಮಾನವರು ತೆಗೆದ ಯಾವುದೋ ಅನ್ಯಗ್ರಹ ನೆಲದ ಛಾಯಾ ಚಿತ್ರದಂತಿತ್ತು. ಆಗಲೇ ಸಿಕ್ಕಿದ್ದು... ಹೆಂಗಸಿನ ಒಂದು ಪಾದರಕ್ಷೆ. 36 ಅಳತೆಯ, ಕೃತಕ ಚರ್ಮದ, ಕೃತಕ ಹರಳುಗಳನ್ನು ಅಂಟಿಸಿತ್ತು. ಮುಂದೆ ನಡೆದಂತೆ : ಬಿಸಿಲಿಗೆ ಬೂದು ಬಣ್ಣಕ್ಕೆ ತಿರುಗಿದ್ದ ಒಂದು ಬೇಸ್ಬಾಲ್ ಟೋಪಿ. ನಂತರ, ಡಜನ್ಗಟ್ಟಲೆ - ಅಲ್ಲಲ್ಲ ನೂರಾರು - ಬಿರುಕು ಬಿಟ್ಟಿದ್ದ ನೀರಿನ ಬಾಟಲಿಗಳು. (ಇವೆಲ್ಲ ಅಡಿಗೆ ಎಣ್ಣೆಯ ಡಬ್ಬಗಳು, ತಂಪಾಗಿಡುವುದಕ್ಕಾಗಿ ಕೆಲವನ್ನು ಗೋಣಿಚೀಲದಂತ ಬಟ್ಟೆಯಿಂದ ಸುತ್ತಿತ್ತು.)
ನಿರ್ಜನ, ಕಡುಬಡವರ, ಅಲೆಮಾರಿಗಳ ಮರುಭೂಮಿಯಲ್ಲಿ ಹಲವು ವಾರಗಳ ನಡಿಗೆಯ ನಂತರ -ಕೆಲಸಕ್ಕೆ ಬಾರದ ವಸ್ತುಗಳು, ತಗಡಿನ ಡಬ್ಬಗಳು, ಪ್ಲಾಸ್ಟಿಕ್ ಬಾಟಲಿಗಳಿದ್ದ, ಮರುಬಳಕೆಗೆ ಉಪಯೋಗಿಸಲ್ಪಡುವಂತ ಪದಾರ್ಥಗಳಿಂದ ತುಂಬಿದ್ದ ಪುರಾತತ್ವ ಶಾಸ್ತ್ರದ ರಿಫ್ಟ್ ವ್ಯಾಲಿಯ ಹೊಸ ಮೇಲ್ಮೈಗೆ ಕಾಲಿರಿಸಿದ್ದೆವು. ಜಿಬೂತಿಗೆ ಇನ್ನು 150 ಮೈಲಿಗಳಿಗೂ ಹೆಚ್ಚಿನ ಅಂತರವಿತ್ತು, ಕೆಂಪು ಸಮುದ್ರದತ್ತ ದಾರಿ. ಇಪ್ಪತ್ತೊಂದನೇ ಶತಮಾನದ ಅಲೆಮಾರಿಗಳ, ದೇಶಭ್ರಷ್ಟರ, ಗಡಿಪಾರಾದವರ, ಅನಾಥರ ತಾಜ್ಯವಸ್ತುಗಳ ಬಯಲು. ಆಫ್ರಿಕಾದ ಶಿರಭಾಗದಲ್ಲಿರುವ ಲಾಳಿಕೆಯಾಕಾರದ, ಬಾಟಲಿನ ಕುತ್ತಿಗೆಯಂತಿದ್ದ ಗಡಿಯ ಸರಹದ್ದನ್ನು ಎಲ್ಲಾ ವಲಸೆ ಕಾರ್ಮಿಕರು ದಾಟಲೇ ಬೇಕು. ಅವರೂ ಸಹ ಪಾದಯಾತ್ರಿಕರೆ, ಹೋಗುತ್ತಿರುವುದು ಯಮೆನ್ಗೆ. ಸೌದಿ ಅರೇಬಿಯಾಗೆ. ದುಬೈಗೆ. ಆಫ್ರಿಕಾದಿಂದ ಹೊರಹೊರಟಾಗ ಮೊದಲ ಹೋಮೊಸೆಪಿಯನ್ಗಳು ಶಿಲಾಯುಗದ ಆಯುಧಗಳಿಂದ ಆರಿಕ್ಸ್ಅನ್ನು ಬೇಟೆಯಾಡಿದಂತೆ ಇವರು ಹೋಗುತ್ತಿರುವುದು ಬೇಟೆಯಾಡಲೇನೂ ಅಲ್ಲ. ಅಥವ ನಮ್ಮ ಹಾಸ್ಯಾಸ್ಪದ ಯೋಜನೆಯ ನಡಿಗೆಯಂತೇನೂ ಅಲ್ಲ. ಅವರು ಹೋಗುತ್ತಿರುವುದು ತಮ್ಮ ಮಾಂಸಖಂಡಗಳನ್ನು ಮತ್ತು ದೇಹಗಳನ್ನು ಬಾಡಿಗೆಗಾಗಿ ದುಡಿಸಲು, ಒಂದು ತುಂಡು ರೊಟ್ಟಿಗೋಸ್ಕರ.
ನಡೆಯುತ್ತಿರುವವರಲ್ಲಿ ದಕ್ಷಿಣ ಇಥಿಯೋಪಿಯಾದ ಒರೋಮೋಗಳಿದ್ದಾರೆ ಮತ್ತು ಗುಡ್ಡಗಾಡಿನ ಟೈಗ್ರೆಯಾನ್ಗಳಿದ್ದಾರೆ. ಪಾಳುಬಿದ್ದ ಸೊಮಾಲಿಯಾದಿಂದ ಗುಳೆ ಹೊರಟಿರುವ ನಿರಾಶ್ರಿತರಿದ್ದಾರೆ. ಎರಿಟ್ರಿಯಾ ಸೈನ್ಯದಿಂದ ಪಲಾಯನಗೊಳ್ಳುತ್ತಿರುವವರೂ ಇದ್ದಾರೆ. ಕೆಲವರು ತರುಣರು, ಕೆಲವು ದಿಟ್ಟ ಹೆಂಗಸರು, ಅವರು ಬಲಿಷ್ಠವಾಗಿರಲೇ ಬೇಕು. ಏಕೆಂದರೆ ಈ ನಿರ್ದಯಿ ಮರುಭೂಮಿಯನ್ನು ದಾಟುವುದು ಅತ್ಯಂತ ಕಠಿಣ. ಕೆಲವರು ನೀರಿಲ್ಲದೇ ಬಾಯಾರಿಕೆಯಿಂದ ಬಳಲಿ ಸಾವನಪ್ಪುತ್ತಾರೆ. ಕೆಂಪು ಸಮುದ್ರವನ್ನು ಅಭದ್ರವಾದ, ಶಿಥಿಲಗೊಂಡ ದೋಣಿಗಳಲ್ಲಿ ದಾಟುವಾಗ ಪ್ರತಿವರ್ಷ ಸಾವಿರಾರು ಜನ ಮುಳುಗಿ ಸತ್ತಿದ್ದಾರೆ. ಆದರೂ ಆಶಾಭಾವನೆಯಿಂದ ಬರುತ್ತಾರೆ. ಕಡಿಮೆಯೆಂದರೂ ಪ್ರತಿವರ್ಷ ಒಂದು ಲಕ್ಷ ಜನ ಆಫ್ರಿಕಾಖಂಡದಿಂದ ಹೀಗೇ ವಲಸೆ ಹೋಗುತ್ತಾರೆ. ಮಾನವ ಕಳ್ಳಸಾಗಣೆದಾರರ ಮಾರ್ಗದರ್ಶನದಲ್ಲಿ ಸಾಮಾನ್ಯವಾಗಿ ರಾತ್ರಿಯಲ್ಲಿ ಮಾತ್ರ ಚಾರಣಿಸುತ್ತಾರೆ. ದಂಡಿನಂತ ಜನಸಮೂಹದ ಜೊತೆ ಈ ದೇವರಿಲ್ಲದ ಬರಡು ಮರುಭೂಮಿ ಕತ್ತಲೆಯಲ್ಲಿ ತೆವಳುತ್ತದೆ. ನಕ್ಷತ್ರದ ಬೆಳಕಿನಲ್ಲಿ ಆಫ್ರಿಕಾದಿಂದಾಚೆಗೆ ವಲಸೆ ಮುಂದುವರೆಯುತ್ತದೆ.
Migrants take a break near the Djibouti border.
Paul Salopek
ಸುಳಿಗಾಳಿಯಂತೆ ಚಲಿಸುವ ಈ ಜನರನ್ನು ಅಫಾರ್ ಅಲೆಮಾರಿಗಳು ಹಹೈ ಎಂದು ಹೆಸರಿಟ್ಟಿದ್ದಾರೆ.
ಮರುಭೂಮಿಯಲ್ಲಿ ನುಸುಳಿಹೋಗುವ ಈ ಜನರು ತಾವು ನಡೆಯುವ ಜಾಡಿನಲ್ಲಿ ಏನನ್ನಾದರೂ ತ್ಯಜಿಸಿರುತ್ತಾರೆ. ಚಪ್ಪಲಿ ಇರಬಹುದು, ಅಡಿಗೆ ಪಾತ್ರೆ ಇರಬಹುದು, ಚಲಾವಣೆಯಿಲ್ಲದ ನಾಣ್ಯಗಳಿರಬಹುದು ಮತ್ತು ಅವರ ಮೂಳೆಗಳು, ಮುಂದಡಿಯಿಡಲು ಅಸಾಧ್ಯವಾಗಿ ಜೀವ ತೆತ್ತವರ ಮೂಳೆಗಳು ಅಸ್ತವ್ಯಸ್ಥವಾಗಿ ಜೋಡಿಸಿದ ಕಲ್ಲುಗಳಡಿಯಲ್ಲಿ.
ಕನ್ನಡಕಗಳು (ಗಾಜುಗಳಿಲ್ಲದ). ಟೀ ಶರ್ಟ್. ಒಳ ಉಡುಪು. ಜಿಲೆಟ್ ಶೇವಿಂಗ್ ಕ್ರೀಮ್ ನ ಡಬ್ಬ. ಬಿಸಿಲಲ್ಲಿ ಜರ್ಜರಿತವಾದ ಬೆನ್ನುಚೀಲ (ಮಕ್ಕಳ ಚಿತ್ರಗಳನ್ನು ಅಚ್ಚುಹಾಕಲಾಗಿತ್ತು).
ಯಾವುದೋ ಅಫಾರ್ ಶಿಬಿರದಲ್ಲಿದ್ದಾಗ ಒಂದು ಬೆಳಿಗ್ಗೆ ಈ ಹಹೈಅನ್ನು ಭೇಟಿಯಾದೆವು.
ಇಥಿಯೋಪಿಯಾದ ಗುಡ್ಡಗಾಡು ಪ್ರದೇಶದಿಂದ ನಡೆಯುತ್ತಾ ನಿತ್ರಾಣಗೊಂಡಿದ್ದ 15 ಮಂದಿಯ ಗುಂಪು, ವಿಶ್ವಸಂಸ್ಥೆಯ ಬಡತನ ಸೂಚ್ಯಂಕದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಈ ದೇಶ 187 ದೇಶಗಳಲ್ಲಿ 174ನೆಯದು, ಇದಕ್ಕಿಂತ ಉತ್ತಮ ಸ್ಥಾನದಲ್ಲಿರುವ 165ನೇ ಸ್ಥಾನದ ಜಿಭೂತಿಗೆ, ನಂತರ ಇನ್ನೂ ಶ್ರೀಮಂತವಾಗಿರೋ 154ನೆ ಸ್ಥರದಲ್ಲಿರುವ ಯಮೆನ್ಗೆ ನಡೆಯುತ್ತಿದ್ದರು. ದಿನದ ಬೆಳಕಿನಲ್ಲಿ ಈ ವಲಸಿಗರು ಏಕೆ ಅದೃಶ್ಯರಾಗಿರುತ್ತಾರೆಂದು ಈ ಅಂಕಿ ಅಂಶಗಳು ಸೂಚಿಸುತ್ತವೆ.
ರಾತ್ರಿಯೆಲ್ಲಾ ನಡೆದಿದ್ದ ಈ ಜನರ ಗುಂಪು ಸಣ್ಣ ಬಂಡೆಗಳ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಹೂಜಿಯಂತ ಡಬ್ಬಗಳಿಂದ ನೀರನ್ನು ಗುಟುಕರಿಸುತ್ತಿದ್ದರು. ಒಬ್ಬ ನುಗ್ಗಾಗಿದ್ದ ತಗಡಿನ ಪಾತ್ರೆಯಲ್ಲಿ ‘ಬೆಸ್ಸೊ’ ಎಂಬ ಬಾರ್ಲಿ ಗಂಜಿಯನ್ನು ಬರಿಗೈಯಲ್ಲಿ ಕಲೆಸುತ್ತಿದ್ದ. ಅವರ ಕಳ್ಳಸಾಗಣೆದಾರ ನಾಯಕ ಒಬ್ಬ ವಯಸ್ಕ ಅಫಾರ್, ದೂರದಲ್ಲಿ ನೀಲಿಕಾಲುಚೀಲದ ಮೇಲೆ ಟೆನ್ನಿಸ್ ಆಟದ ಶೂಗಳನ್ನು ಧರಿಸಿ ಧೂಮಪಾನ ಮಾಡುತ್ತಾ ವಿರಮಿಸಿದ್ದ.
“Besso,” a barley gruel, sustains migrants on the long and risky trail to Djibouti and Saudi Arabia.
Paul Salopek
"ಯೆಮೆನ್ ಬಹಳ ಕಷ್ಟ" ಒಬ್ಬ ವಲಸಿಗ ಹೇಳಿದ್ದು, "ಕತ್ತಿ ಮತ್ತು ಬಂದೂಕುಗಳಲ್ಲೇ ನಮ್ಮ ಪ್ರಾಣತೆಗೆಯುತ್ತಾರೆ".
ಆತ ಅಪನಂಬಿಕೆಯನ್ನು ವ್ಯಕ್ತಪಡಿಸಿದ ನನ್ನ ಮುಖಚರ್ಯೆಯನ್ನು ಗಮನಿಸಿದ.
"ಇದು ನಿಜ" ಎಂದ ಇನ್ನೊಬ್ಬ. ಅವನ ಹೆಸರು ಡೇನಿಯಲ್. ವೊಲ್ಲೊ ಪ್ರಾಂತ್ಯದಿಂದ 13 ದಿವಸದಿಂದ ನಡೆಯುತ್ತಿದ್ದಾನೆ. ಸೌದಿ ಅರೆಬಿಯಾದಲ್ಲಿ ಕೆಲಸ ಸಿಗುವ ದಿನಗಳು ಹತ್ತಿರವಿದೆ ಎಂದು ತಿಳಿದಿದ್ದ. ಅಲ್ಲಿಯ ಕೆಲಸದ ಸಂಬಳ 4000 ಇಥಿಯೋಪಿಯಾ ಬಿರ್ - ಸುಮಾರು 200 ಡಾಲರ್ - ಒಂದು ತಿಂಗಳಿಗೆ. ಇದು ಒಳ್ಳೆಯ ಮೊತ್ತವೆ. ಇಥಿಯೋಪಿಯಾದಲ್ಲಿ ಸಿಗುವುದಕ್ಕಿಂತ ದುಪ್ಪಟ್ಟು. ಆತ ಈ ಕಥೆ ಹೇಳುತ್ತಾನೆ.
ಹೋದ ವರ್ಷ ಯೆಮೆನ್ ನಲ್ಲಿದ್ದಾಗ ಇವನ ನಿರ್ಗತಿಕ ಅಲೆಮಾರಿ ಗುಂಪಿನ ಮೇಲೆ ಕಳ್ಳರು ಹಲ್ಲೆ ನಡೆಸಿದ್ದರು. ಆ ಯೆಮೆನಿ ಗುಂಪು ಇವರಲೊಬ್ಬನನ್ನು ಚಾಕುವಿನಿಂದ ಚುಚ್ಚಿ ಸಾಯಿಸಿ ಬಾವಿಯೊಳಗೆ ತಳ್ಳಿದ್ದರು. ಡೇನಿಯಲ್ ಒಂದು ಪೊದೆಯೊಳಗೆ ಮೂರುದಿನ ತಿನ್ನಲೂ ಸಹ ಏನೂ ಇಲ್ಲದೆ ಬಚ್ಚಿಟ್ಟು ಕುಳಿತು ನಂತರ ಸೌದಿ ಗಡಿಯಾಚೆಗೆ ಜಾರಿಕೊಂಡನಂತೆ. ಇದನ್ನು ಹೇಳಿಕೊಂಡು ನಗುತ್ತಿದ್ದ. ಅಲ್ಲಿದ್ದವರೆಲ್ಲಾ ನಗುತ್ತಿದ್ದರು. ಅಷ್ಟೊತ್ತಿಗೆ ಗಂಜಿ ಬಂತು. ಮಾತು ಮುಂದುವರೆಯಲಿಲ್ಲ. ಎಲ್ಲರ ಕಣ್ಣಿನಲ್ಲೂ ಸಾಗರದಷ್ಟು ಆಶಾಭಾವನೆಗಳು ಉಕ್ಕುತ್ತಿದ್ದವು. ಅಲ್ಲಿಗೆ ಕಥೆ ಮುಗಿಯಿತು.
The address books of migrants in the Horn of Africa are left behind to be perused—and eaten—by rodents.
Paul Salopek
ದುಬೈ ಫೋನ್ ಸಂಖ್ಯೆಗಳಿದ್ದ ಎರಡು ವಿಳಾಸದ ಪುಸ್ತಕಗಳು (ಇಲಿಗಳು ತಿಂದುಹಾಕಿದ್ದವು).ಶರಾಯಿಗಳು (ಪ್ಯಾಂಟ್). ಒಂದು ಜಾಮ್ ಬಾಟಲಿ. ಒಂದು 7.62 ಎಮ್ಎಮ್ ಕವಚ.
ಬಯಲಿನ ಕಲ್ಲುಗಳ ಮೇಲೆ ಕತ್ತಲು ಕವುಚಿತು. ನಮ್ಮ ಸಣ್ಣ ಕಾರವಾನ್ ಅಲ್ಲಿಗೆ ಸ್ಥಗಿತಗೊಂಡಿತ್ತು.
ನನ್ನ ಮಾರ್ಗದರ್ಶಿ ಅಹ್ಮೆದ್ ಅಲೆಮಾ ಹೆಸನ್ ಎಂಥದೋ ಟೈಫಾಯಿಡ್ನಂತ ಖಾಯಿಲೆಗೆ ಸಿಕ್ಕು ನರಳುತ್ತಿದ್ದ. ನನಗೂ ಮೈ ಸರಿಯಿರಲಿಲ್ಲ. ನಾವೆಲ್ಲ ಹಸಿದಿದ್ದೆವು. ಆ ದಿನ 22 ಮೈಲಿ ನಡೆದಿದ್ದೆವು. ನಮ್ಮ ಆಹಾರದ ಸಂಗ್ರಹ ಮುಗಿಯಲಿಕ್ಕೆ ಬಂದು, ಕೆಲವೇ ಪೊಟ್ಟಣಗಳಷ್ಟು ನೂಡಲ್ ಮತ್ತು ಬಿಸ್ಕೆಟ್ಗಳಿದ್ದವು. ಬೇಗ ಶಿಬಿರದ ಬೆಂಕಿ ಆರಿಸಿ ಹೊದಿಕೆಯೊಳಗೆ ತೂರಿಕೊಂಡೆವು. ಎಳೆ ಬಿಸಿಲು ತುಂಬಿದ್ದ ಮನೆಯೊಂದರ ಬಗ್ಗೆ ನಾನು ಯೋಚಿಸುತ್ತಿದ್ದೆ. ಬೆಟ್ಟದ ತುದಿಯಲ್ಲೊಂದು ಬಿಳಿಯ ಮನೆ, ಮನೆಯ ಸುತ್ತಾ ಹೂವ ರಾಶಿ, ಗಿಡಮರಗಳು, ಅಡಿಗೆ ಮನೆಯೊಳಗಿಂದ ಮನೆಯೊಡತಿಯ ನಗು. ಹದದಾ ಐಬಿಸ್ ಹಕ್ಕಿಯ ಕಲರವ. ನನ್ನ ಹೃದಯ ಕನಸು ಕಾಣುತ್ತಿತ್ತು.
"ಪಾಲ್?" ಅಲೆಮಾ ಕಿವಿಯೊಳಗೆ ಪಿಸುಗುಡುತ್ತಿದ್ದ. ಆತುರದಿಂದ "ಹೇ, ಪಾಲ್".
ನನಗಾಗಲೆ ಶಬ್ದ ಕೇಳಿಸಿತ್ತು. ಕತ್ತಲಿನ ಗರ್ಭದೊಳಗಿಂದ ಏನೋ ಅನುರಣಿಸುವಂತೆ. ನಿಧಾನವಾಗಿ ಹೆಚ್ಚಾಗುತ್ತಾ ಬಂತು, ಕಾಡುಮೃಗಗಳ ಗುಂಪು ಹತ್ತಿರ ಓಡಿಬಂದಂತೆ. ಆದರೆ ಈ ಪ್ರದೇಶದಲ್ಲಿ ಪ್ರಾಣಿಗಳು ಇರಲು ಸಾಧ್ಯವೆ? ಒಂದು ಹುಲ್ಲು ಗರಿಕೆಯಾಗಲೀ, ಕುಡಿಯುವ ನೀರಿನ ಬಾವಿಯಾಗಲೀ ಸುಮಾರು ಮೈಲಿಗಳಾಚೆ ಇದೆ. ಎದ್ದು ಕುಳಿತೆ.
ನಂತರ ಅವರೆಲ್ಲಾ ಬಂದರು. ಅಲೆಮಾನ ಟಾರ್ಚ್ ಬೆಳಕಿನಲ್ಲಿ ಕಂಡವು ಅಸ್ಪಷ್ಟ ರೇಖೆಗಳ ಸಾಲು ಸಾಲು.
ಅದೊಂದು ಗಂಡಸರು ಮತ್ತು ಹೆಂಗಸರ ತಂಡ, ಕತ್ತಲಿನಿಂದ ಕವಲೊಡೆದಂತೆ ಕಾಣುತ್ತಿದ್ದವು ಕಪ್ಪು ಮತ್ತು ಬೂದು ಬಣ್ಣದ ಆಕೃತಿಗಳು. ನಮ್ಮ ಶಿಬಿರವನ್ನು ಒಂದೇ ಸಲಕ್ಕೆ ಆ ಗುಂಪು ದಾಟಿತು. ಐದು, ಆರು, ಒಂದು ಡಜನ್. ಎಣಿಸಲು ಪ್ರಾರಂಭಿಸಿ ತೊಂಬತ್ತರ ನಂತರ ಕೈಬಿಟ್ಟೆ. ಅವರ ನಡಿಗೆಯಿಂದ ತೆಳ್ಳನೆಯ ಧೂಳಿನ ಮೋಡವೆದ್ದಿತು. ಅವರು ತಲೆಯೆತ್ತಿ ನೋಡುತ್ತಿರಲಿಲ್ಲ. ಅವರು ಬೆಳಕನ್ನೇನೂ ಜೊತೆಗೆ ಕೊಂಡೊಯ್ಯಲಿಲ್ಲ. ಅವರು ಬಿಟ್ಟುಹೋಗುತ್ತಿದ್ದುದು ಅತ್ಯಲ್ಪ. ನಮ್ಮ ನಡುವೆ ಒಂದು ಪದವೂ ವಿನಿಮಯವಾಗಲಿಲ್ಲ. ನನ್ನ ನಾಲಗೆ ಹೊರಳಲಿಲ್ಲ.
