ನೀವು ಒಂಟೆಗಳಿಗೆ ಮಧ್ಯಾಹ್ನ ಧಾರಾಳವಾಗಿ ವಿಶ್ರಾಂತಿ ಕೊಡುವುದು ಒಳ್ಳೆಯದು. ಹಾಗಾಗಿ ಒಂಟೆಗಳನ್ನು ಹತೋಟಿಯಲ್ಲಿಡಲು ಸಹಾಯವಾಗುತ್ತದೆ.
ಒಂಟೆಗಳನ್ನು ಕಲ್ಲುಗಳ ಮೇಲೆ ನಡೆಸುವುದನ್ನು ತಪ್ಪಿಸಬೇಕು - ಒಂಟೆಗಳ ಗೊರಸುಗಳು ಅಷ್ಟೇನೂ ಗಡುಸಲ್ಲ, ಬಹಳ ಮೃದು ಮತ್ತು ಮೆತ್ತನೆಯಂತಿರುತ್ತದೆ. (ನಮ್ಮ ವಯಸ್ಕ ಒಂಟೆ, ಫೇರ್ಸ್ ನ್ನು ಕಟ್ಟಿದ ಹಗ್ಗದಿಂದ ಕಲ್ಲುಗಳ ಮೇಲೆ ನಡೆಯಲು ಎಳೆದರೆ, ತನ್ನ ದವಡೆಗಳಿಂದ ಎಳೆಯುವವನ ಭುಜವನ್ನು ಹಿತವಾಗಿ ಕಚ್ಚಿ ತನ್ನ ಅಸಂತೋಷವನ್ನು ವ್ಯಕ್ತಪಡಿಸುತ್ತದೆ.)
ಒಂದು ಒಂಟೆ 3 ರಿಂದ 5 ದಿನಗಳವರೆಗೆ ನೀರಿಲ್ಲದೆ ನಡೆಯಬಲ್ಲದು. ಬೆಡೂಯಿನ್ಗಳು ಬಹಳ ಅಭಿಮಾನದಿಂದ ಒಂಟೆಗಳು ವಾರಗಟ್ಟಳೆ ಅಥವ ತಿಂಗಳುಗಟ್ಟಳೆ ನೀರಿಲ್ಲದೆ ಇರುತ್ತವೆ ಎಂದು ಬಡಾಯಿ ಕೊಚ್ಚುತ್ತಾರೆ. ಹಾಗೆ ಪರೀಕ್ಷೆ ಮಾಡುವುದು ಸೂಕ್ತವಲ್ಲ. ಅತಿ ಪ್ರೀತಿಯಿಂದ ಈ ಹೇಳಿಕೆ ಹುಟ್ಟಿರುವುದು.
ಪ್ರಯಾಣಿಸುವಾಗ ದಿನಕ್ಕೆ ಎರಡು ಸಲ ಆಹಾರ ಕೊಡಬೇಕು, ಬೆಳಿಗ್ಗೆ ಮತ್ತು ರಾತ್ರಿ: ಲಭ್ಯವಿದ್ದಾಗ ಒಂದಷ್ಟು ಸೊಪ್ಪಿನ ಮೇವು ಮತ್ತು ಒಂದು ಬಕೆಟ್ನಷ್ಟು ಕಾಳುಗಳನ್ನು ಕೊಡುವುದು ಒಳ್ಳೆಯದು. ಅವುಗಳು ಕಿತ್ತಳೆಯ ತೊಗಟೆ, ಬಾಳೆಹಣ್ಣಿನ ಸಿಪ್ಪೆ, ಹಳೆ ರೊಟ್ಟಿಯ ತುಂಡುಗಳು, ಕಂಪ್ಯೂಟರ್ ನ್ನು ಸುತ್ತಿಡುವ ಪ್ಲಾಸ್ಟಿಕ್ನ ಗುಳ್ಳೆಗಳ ಹೊದಿಕೆ, ನಿಮ್ಮ ಜೀವಂತ ತಲೆಕೂದಲು ಮತ್ತು ಸಾವಿರಾರು ವಿಧದ ಸೊಪ್ಪು, ಮುಳ್ಳು, ಪೊದೆ ಮತ್ತು ಗಿಡ ಮರಗಳನ್ನೆಲ್ಲ ಭಕ್ಷಿಸುತ್ತವೆ. ಒಂಟೆಗಳ ಸ್ವಾದದ ವಿಸ್ತಾರತೆಯ ಬಗ್ಗೆ ಗಾಬರಿಯಾಗಬೇಕಿಲ್ಲ, ಅವುಗಳ ಜಠರ ಟೈಟೇನಿಯಂನಿಂದ ಮಾಡಲ್ಪಟ್ಟಿದೆ. ಅವೇನಾದರೂ ಅಜೀರ್ಣತೆಯಿಂದ ಬಳಲುತ್ತಿದ್ದರೆ, ಹೇಗಾದರೂ ಮಾಡಿ, ಎಲ್ಲವನ್ನು ಕಕ್ಕುವ ತನಕ ಮೂಗಿನ ಹೊಳ್ಳೆಗಳನ್ನು ಹಿಡಿದಿಟ್ಟರೆ ಸಾಕು, ನಿಮ್ಮ ಪಾದರಕ್ಷೆಗಳ ಮೇಲೆಲ್ಲ ತನ್ನ ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕಿ ಹೊರೆ ಇಳಿಸಿಕೊಳ್ಳುತ್ತವೆ.
ಖಂಡಿತ ನಿಮ್ಮ ಪ್ರಾಣಿಗಳನ್ನು ಮುದ್ದು ಮಾಡಬೇಡಿ. ಒಂಟೆಗಳು ಕೆಲಸದಲ್ಲಿ ನಿಮ್ಮ ಪಾಲುದಾರ, ಮುದ್ದಿನ ಪ್ರಾಣಿಯಲ್ಲ. ಅದರ ಬೃಹತ್ತಾದ ಕಪ್ಪಾದ ಕಣ್ಣುಗಳನ್ನು ದಿಟ್ಟಿಸುತ್ತಾ, ದೃಢವಾಗಿ ಸಂಭೋದಿಸಬೇಕು. ಬೇಕಾದರೆ ಕಿವಿಗಳನ್ನು ತುರಿಸಿ ಅವುಗಳನ್ನು ಸಂತೋಷ ಪಡಿಸಬಹುದು.
ನಿಮ್ಮ ಪ್ರಾಣಿಗಳನ್ನು ಎಂದಿಗೂ ಹೊಡೆಯಬೇಡಿ: ಏಕೆಂದರೆ ನೆನಪಿಟ್ಟುಕೊಳ್ಳುತ್ತವೆ. (ಪ್ರವಾದಿ ಮೊಹಮ್ಮದರು ಒಂದು ಬಾರಿ ಮದೀನಾದಲ್ಲಿ ಅಳುತ್ತಿದ್ದ ಒಂಟೆಯನ್ನು ಅದನ್ನು ಕಟ್ಟಿದ್ದ ಕಂಬದಿಂದ ಬಿಚ್ಚಿ ಸಂತೈಸಿದ್ದರಂತೆ: ಆ ಒಂಟೆ, ಕಣ್ಣೀರು ತುಂಬಿಕೊಂಡು, ತನ್ನ ಒಡೆಯನ ದುರ್ವತನೆ ಬಗ್ಗೆ ಗೋಳಾಡಿತ್ತು. ಪ್ರವಾದಿಗಳು ಒಂಟೆಯ ಒಡೆಯನನ್ನು ಹುಡುಕಿ ಕರೆಯಿಸಿ ಕಠಿಣವಾಗಿ ಖಂಡಿಸಿದ್ದರು.)
ನೀವು ವರ್ಷಾನುಗಟ್ಟಳೆ ಒಂದೇ ಒಂಟೆಯ ಜೊತೆ ಕೆಲಸ ಮಾಡಬಹುದು ... ಆದರೂ ನಿಮಗೆ ಅವುಗಳಿಂದ ಕಲಿಯಲಾಗದ 70,000 ರಹಸ್ಯಗಳಿರುತ್ತವೆ. ಇದನ್ನು ಯೆಮೆನ್ನ ರಾಯಭಾರಿ ಜಿಭೂತಿಯಲ್ಲಿ ನನಗೆ ತಿಳಿಸಿದ್ದರು.
ಸರಕಿನ ಒಂಟೆಯ ಸಾಮಾನುಗಳ ಕಂತೆಕಟ್ಟುವುದು, ರೇಖಾಗಣಿತ ಮತ್ತು ವಾಸ್ತುಶಿಲ್ಪಗಳಿಗೆ ಸಂಬಂಧಪಟ್ಟ ಎದೆಗುಂದಿಸುವಂತಹ ಸಮಸ್ಯೆ. ಜೀನನ್ನು ಸೂಕ್ತ ಜಾಗದಲ್ಲಿ ಜೋಡಿಸುವುದು ಬಹಳ ಮುಖ್ಯ. ಒಂದು ಇಂಚು ಹಿಂದು ಮುಂದಾದರೂ ಸರಿಯೆ ಒಂಟೆಗಳು ಆಕ್ಷೇಪಿಸುತ್ತವೆ. ಹಾಗೂ ಮರಳಲ್ಲಿ ಬಿದ್ದು ಒದ್ದಾಡುತ್ತವೆ. ಒಂದು ಒಂಟೆಯ ಗೂನು ಇನ್ನೊಂದರಂತಿರುವುದಿಲ್ಲ. ಹಾಗಾಗಿ ನೀವು ಒಂದು ಒಂಟೆಯ ಮೇಲೆ ಅಚ್ಚು ಕಟ್ಟಾಗಿ ಸರಕು ಪೇರಿಸುವುದನ್ನು ಸಾಧಿಸಬೇಕು. ಅವಾದ್ ಓಮ್ರಾನ್, ಸುಡಾನ್ನಿನ ಒಂಟೆ ಮೇಲ್ವಿಚಾರಕ ಸೀಮಾ ಒಂಟೆಯ ಸರಕಿನ ಜೋಡಣೆ ಉಸ್ತುವಾರಿ ಹೊತ್ತಿದ್ದ. ನಾನು ಫೇರ್ಸ್ ನ ಉಸ್ತುವಾರಿ ಹೊತ್ತಿದ್ದೆ. ಇದನ್ನು ಪ್ರತಿದಿನ 3ಸಲ ಮಾಡುತ್ತಿದ್ದೆವು. (ಬೆಳಿಗ್ಗೆ, ಮಧ್ಯಾಹ್ನ, ಸಂಜೆ) ಇದೊಂದು ಸಂತೋಷಕರವಾದ ಆಚರಣೆ, ಇದು ನಮ್ಮನ್ನು ಈ ದೈತ್ಯ, ಅದ್ಭುತ ಮತ್ತು ಆತ್ಮ ತೃಪ್ತಿಯಿಂದ ಕೂಡಿದ್ದ ಈ ಜೀವಿಯ ಜೊತೆಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ನಾನಂತೂ ಇದನ್ನು ಕೈಗಾರೀಕರಣದ ಉತ್ತರ ಗೋಳಾರ್ಧದಲ್ಲಿ ಕಳೆದುಕೊಳ್ಳಲಿದ್ದೇನೆ, ಎಲ್ಲರಂತೆ ವಾಹನಗಳ ಸಾಮ್ರಾಜ್ಯದಲ್ಲಿ ಬಳಲಬೇಕು.
Video by Paul Salopek, Adam Jabari Jefferson
