ಕಣ್ಣಲ್ಲಿ ಹಚ್ಚುವ ಕಾಡಿಗೆ ಕಣ್ಣುಕಪ್ಪಿನಷ್ಟು ಬೆಂಕಿಯಿಂದ ಕಪ್ಪಾಗಿದ್ದ ಗುಹೆಗಳನ್ನು ದಾಟಿ ನಡೆಯುತ್ತಿದ್ದೆವು. ಕೆಲವು ಗುಹೆಗಳಲ್ಲಿ ಆಧುನಿಕ ಗುಹಾವಾಸಿಗಳು ನೆಲೆಸಿದ್ದರು - ಮನೆಗಳಿಲ್ಲದ ಬೆಡೋಯಿನ್ ಬುಡಕಟ್ಟಿನವರು. (“ಅಂಥ ಕೆಟ್ಟದ್ದೇನಿಲ್ಲ. ಇಲ್ಲಿ ಸುಂಕ ಕಟ್ಟುವಂತಿಲ್ಲ!”) ಹಾವಿನಂತೆ ಡೊಂಕಾಗಿ ಹರಿಯುತ್ತಿದ್ದ ಬಹುದೊಡ್ಡ, ಒಣಗಿದ್ದ, ನಾಲೆಯ ಪಾತ್ರದ ಅಂಚಿನಲ್ಲೇ ಎಡತಾಕುತ್ತಾ ಉಸಿರು ಕಟ್ಟಿಸುವಂತಿದ್ದ ಜೋರ್ಡಾನ್ ಕಣಿವೆಯ ತಳಭಾಗಕ್ಕೆ ಬಂದಿಳಿದೆವು. ಎರಡು ಮಿಲೆನಿಯಂ ಹಿಂದೆ ವ್ಯಾಪಾರಿಗಳ ಚಪ್ಪಲಿಗಳು ಸವೆಸಿದ್ದ ಜಾಡನ್ನೇ ಅನಿಶ್ಚತತೆಯಲ್ಲಿ ಕ್ರಮಿಸಿದೆವು. ನೀಲಿವರ್ಣದ ಜೂನಿಪರ್ ಪೊದೆಗಳನ್ನು ಹಿಂದಿಕ್ಕಿದೆವು. ಬೂದು ಬಣ್ಣದ ಅಕೇಶಿಯ ಸಸ್ಯಗಳನ್ನು ದಾಟಿದೆವು. ಪ್ರಸ್ತುತವಿರುವ ಎಲ್ಲಾ ವರ್ಣದ, ಜೀವ ವೈವಿಧ್ಯದ ಛಾಯೆಗಳನ್ನು ದಾಟುತ್ತಾ ಕೊನೆಗೆ ನೆರಳೇ ಇಲ್ಲದ ಪ್ರದೇಶಕ್ಕೆ ಬಂದೆವು. ಸೂರ್ಯಾಸ್ತದ ಸಮಯಕ್ಕೆ ಮತ್ತೆ ಮರುಭೂಮಿಯ ಪ್ರವೇಶ. ಮರಳು ದಿಣ್ಣೆಗಳ ಸಾಗರ, ಹಳದಿ ಬಣ್ಣದ ಬೆಳಕಿನುಂಡೆಗಳ ಮಧ್ಯೆ ನಡೆಯುತ್ತಾ. ಈಗ ಸಮುದ್ರ ಮಟ್ಟದಲ್ಲಿದ್ದೇವೆ, ಗ್ರೇಟ್ ರಿಫ್ಟ್ ನ ಮೇಲ್ತುದಿಯಿಂದ ಸುಮಾರು 3,000 ಅಡಿಗಳ ಕೆಳಗೆ.
Stale bread: camel fodder in the parched Jordan Valley.
Paul Salopek
ಬೆಡುಲ್ನ ಕುರಿಗಾಹಿಗಳ ಶಿಬಿರದಲ್ಲಿ ವಾಸ್ತವ್ಯ. ಈ ವರ್ಷ ಹುಲ್ಲಿಲ್ಲದ್ದರಿಂದ ಈ ಅರೆಅಲೆಮಾರಿಗಳು ಒಂಟೆಗಳಿಗೆ ಚೀಲಗಳಲ್ಲಿ ತುಂಬಿ ತಂದಿದ್ದ ಹಳಸಿದ ರೊಟ್ಟಿಗಳ ಮೇವನ್ನಿಟ್ಟಿದ್ದರು. ನಾನು ಈ ಪ್ರಾಣಿಗಳ ಸೋಜಿಗದ ಕೊರಳಲ್ಲಿ ಬೆರಳಾಡಿಸಿದೆ, ಹೇಗೆಂದರೆ ಹಾಗೆ ಬಳಕುವ ಅಸೀಮ ಬಲವಿದ್ದ, ತ್ರಿಕೋನಾಕಾರದ ಕೊರಳುಗಳು. ಮೌನಕ್ಕೆ ಶರಣಾಗಿರುವ ಸನ್ಯಾಸಿಗಳಂತೆ ತೀವ್ರ ಚಿಂತಾಕ್ರಾಂತವಾಗಿ ಹೆಜ್ಜೆಗಳನ್ನಿಡುತ್ತಿದ್ದವು.
Crossing the dunes one shadow length at a time.
Paul Salopek
ಮರುದಿನ ಬೆಳಗ್ಗೆ ನಮ್ಮ ಎರಡು ಪುಟ್ಟ ಗುಡ್ಡಗಾಡಿನ ಹೇಸರಗತ್ತೆಗಳ ಗೊರಸುಗಳು ಕಂಚಿನಂತೆ ಹೊಳೆಯುತ್ತಿದ್ದ ಮರುಭೂಮಿಯ ಮರಳಿನಲ್ಲಿ ಹುದುಗಿದವು. 5 ಮೈಲಿಗಳ ನಂತರ ಟೊಮೊಟೊ ಹಣ್ಣುಗಳನ್ನು ಆಯುತ್ತಿದ್ದವರ ಶಿಬಿರಗಳನ್ನು ನಾವು ಕಂಡೆವು, ಅವರೆಲ್ಲಾ ಸಿರಿಯನ್ನರು, ಯುದ್ಧ ನಿರಾಶ್ರಿತರು. ಅವರ ನಗರಗಳೆಲ್ಲಾ ನಾಶವಾಗಿದೆ. ಶಿಬಿರದಿಂದ ಹೊರಬಂದ ಹೆಂಗಸೊಬ್ಬಳು ನಮ್ಮನ್ನು ನೋಡಿ ಕೈಯಾಡಿಸಿ ಸನ್ನೆ ಮಾಡಿದಳು. ಶಿಬಿರದೊಳಗೆ ತೂಗು ಹಾಕಿದ್ದ ಚಾಪೆಯ ಹಿಂದೆ ಹೋಗಿ ಅವಳ ಅತ್ಯುತ್ತಮ ಬಟ್ಟೆಯನ್ನು ತೊಟ್ಟು ಹೊರಬಂದಳು, ಹೊಳೆಯುವ ಗುಲಾಬಿ ಬಣ್ಣದ ಮೇಲೆ ಲೋಹದ ಬಣ್ಣದ ಗೆರೆಗಳುಳ್ಳ ದಿರಿಸಿನಲ್ಲಿದ್ದ ತುಂಬುಗರ್ಭಿಣಿ. ಕುದುರೆಗಳನ್ನು ಸಹ ಶಾಂತವಾಗಿಸುವ ಅವಳ ಸೌಂದರ್ಯ. ಕಾಡು ನಿಂಬೆ ಸುವಾಸನೆಯಿರುವ ಚಹಾವನ್ನಿತ್ತು ಸತ್ಕರಿಸಿದಳು.
ಈಶಾನ್ಯ ದಿಕ್ಕಿನೆಡೆ, ಎಂಟು ಮೈಲಿಗಳ ದೂರದಲ್ಲಿ ಒರಟು ಬಂಡೆಗಳ ನಿರ್ಜನ ಪ್ರದೇಶದಲ್ಲಿ ವಾಡಿ ಫೆನಾನ್ ಎಂಬ ಒಣಗಿದ ನಾಲೆ. ಹೇಸರುಗತ್ತೆಗಳನ್ನು ಕಟ್ಟಿಹಾಕಿ ಪುರಾತತ್ವ ಶಾಸ್ತ್ರದ ಅವಶೇಷಗಳಿರುವ ಸ್ಥಳವೊಂದಕ್ಕೆ ಏರಿದೆವು. ಇದು 11,700 ವರ್ಷಗಳಷ್ಟು ಹಳೆಯದು. ಯಾವುದೋ ಪ್ರಾರ್ಥನಾ ಸ್ಥಳದಂತೆ, ಇದೊಂದು ಅಸಮಾನ್ಯ - ಯಾರೂ ಕೇಳಿರದ ವಿಷಯ. ಇದನ್ನು ಕಟ್ಟಿದ್ದು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರಿರಬಹುದು. ಸ್ವೇಚ್ಛೆಯಿಂದ ಸುತ್ತಾಡುತ್ತಿದ್ದ ಆಫ್ರಿಕಾದಿಂದ ಹೊರಟ, ಮೊದಲ ಮಾನವರಂಥ ಮನುಷ್ಯರಿರಬಹುದು: ನಗರವಾಸಿಗಳಂತೂ ಅಲ್ಲ. ಕಲ್ಲು ಕುಟಿಕರೂ ಅಲ್ಲ. ನವಶಿಲಾಯುಗದ ಕ್ರಾಂತಿಯ ಉತ್ತುಂಗ ಶತಮಾನದ ಕಾಲದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದವರಿರಬಹುದು. ವ್ಯವಸಾಯದ ಅರಿವಿಲ್ಲದಿದ್ದಾಗ, ಸಂಘಟಿತ ಧರ್ಮಗಳ ಸಣ್ಣ ಸುಳಿವೂ ಇಲ್ಲದಿದ್ದಾಗ. ಮಾನವನ ಇತಿಹಾಸದಲ್ಲಿ - ಅಲೆಮಾರಿತನದ ಅಂತ್ಯದ ಆರಂಭ ಕಾಲದಲ್ಲಿ.
ಜೋರ್ಡಾನ್ ಕಣಿವೆಯನ್ನು ದಿಟ್ಟಿಸಿ ನೋಡುತ್ತಿದ್ದೆವು. ಹತ್ತಿರದಲ್ಲೆ, ನಸು ಹಳದಿ ಮತ್ತು ಕಂದು ಬಣ್ಣದ ಕಲ್ಲುಗಳ ಸೋಪಾನ ಮತ್ತು ಕಲ್ಲುಗಳ ತಡೆಗೋಡೆ, ಗಿರಣಿಗಳು, ಸೀಸದ ಕಡ್ಡಿಯ ಬಣ್ಣದ ಕಿಟ್ಟದ ಗುಡ್ಡೆಗಳು, ಬಹುಶಃ ಜಗತ್ತಿನ ಮೊಟ್ಟಮೊದಲ ಕುಲುಮೆಗಳು. ಕಡಿಮೆಯಂದರೂ 6,000 ವರ್ಷಗಳಷ್ಟು ಹಳೆಯದು. ಈ ಗಣಿಗಳ ಬಾಯಿ ಮನುಷ್ಯ ತೂರುವ ರಂಧ್ರದಂತಿತ್ತು. ರೋಮನ್ನರ ಕಾಲದಲ್ಲಿ ಈ ಮರುಭೂಮಿಯ ಆಗಸ ಈ ಕುಲುಮೆಗಳಿಂದೆದ್ದ ಹೊಗೆಯಿಂದ ಕಪ್ಪಾಗಿತ್ತೇನೋ, ಕಾಡುಗಳೆಲ್ಲ ಅದೃಶ್ಯವಾಗಿ ಸುಟ್ಟ ಕಲ್ಲಿದ್ದಲು ಗಣಿಗಳು. ಸಾವಿರಾರು ಕ್ರಿಶ್ಚಿಯನ್ ಗುಲಾಮರು ಈ ಗಣಿಗಳಲ್ಲಿ ದುಡಿಯುತ್ತಾ ಸಾವನ್ನಪ್ಪಿದ್ದಾರೆ. ಆದಿಕಾಲದ ಕಾರ್ಮಿಕ ಶಿಬಿರ (ಗುಲಾಗ್). ಫೆನಾನ್ ವಾಡಿ ಮಾನವಕುಲದ ಮೊಟ್ಟಮೊದಲ ಕೈಗಾರಿಕಾ ಕ್ರಾಂತಿಯ ಸೃಷ್ಟಿಗೆ ಸ್ಪರ್ದಿಯಾಗಬಹುದೇನೋ. ಯಾವುದೋ ಬೇಟೆಗಾರರ ಶಿಬಿರಾಗ್ನಿಯಲ್ಲಿ ಆಕಸ್ಮಿಕವಾಗಿ ಹತ್ತಿಕೊಂಡ ಕಿಡಿಯಿಂದ ತಾಮ್ರವನ್ನು ಕರಗಿಸುವಷ್ಟು ಶಾಖದ ಬಿಂದುವನ್ನು ತಲುಪಿದಾಗ. ಶಾಖದ ಉಷ್ಣತೆಯನ್ನು ನಿಯಂತ್ರಿಸುವ ಹೊಸ್ತಿಲನ್ನು ತಲುಪಿದಾಗ ಈ ಪ್ರಪಂಚದ ಹಣೆಬರಹವೆ ಬದಲಾಗಿದೆ. ಶಾಲಾ ಬಾಲಕರು ಈ ಅಂಕಿಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಈ ನಾಲ್ಕು ಅಂಕಿಗಳು, ಡಿಗ್ರಿಗಳಲ್ಲಿ ದಾಖಲಾಗಿದೆ, ತಾಮ್ರದ ಮೇಲೆ ಕೆತ್ತಿ ಎಲ್ಲರಿಗೂ ಸರಿಯಾಗಿ ಕಾಣುವಂತ ಖ್ಯಾತ ಸ್ಮಾರಕವಾಗಬೇಕು. ನಾವೀಗ ಮಾನವ ಪ್ರಜ್ಞೆಯ ಗಡಿಭಾಗದಲ್ಲಿದ್ದೇವೆ. ಫೆನಾನ್ ವಾಡಿ, ಮರೆತಿರುವ ಎಲ್ಲದರಿಂದ, ಇಂದು, ತಿಳಿದಿರುವ ಎಲ್ಲವನ್ನು ವಿಭಜಿಸಿದೆ.
ಸ್ಕ್ವಾ ಬೆಂಕಿ ಹತ್ತಿಸಿ, ಚಹಾವನ್ನು ಕುದಿಯಲಿಟ್ಟು, ಬೆಂಕಿಯನ್ನೇ ದಿಟ್ಟಿಸಿದೆವು.
ನನ್ನೆರಡು ಒಂಟೆಗಳು ನನ್ನಿಂದ ದೂರವಿರುವುದು, ಮನಸ್ಸಿಗೆ ನೋವುಂಟು ಮಾಡಿದೆ, ಅವುಗಳೀಗ ಹೆಜಾಜ್ನ ಹಳೆ ಅಲೆಮಾರಿಗಳ ದಿಗಂತದಲ್ಲಿ ಇವೆ. ಮುಂದೆ ಯಾವ ಅಲೆಮಾರಿಗಳು ಸಿಗುವುದಿಲ್ಲ. ಹೆಚ್ಚು ಕಾಲ ಏನಿಲ್ಲ. ದೂರದ ಮಧ್ಯ ಏಷ್ಯಾ ಹುಲ್ಲುಗಾವಲುಗಳು ಸಿಗುವತನಕವಂತೂ ಇಲ್ಲ.
