ಬಾ, ಬಾ, ನೀ ಯಾರಾದರೇನಂತೆ,
ಅಲೆಮಾರಿಯಾದರೇನಂತೆ, ಪೂಜಾರಿಯಾದರೇನಂತೆ,
ಜಂಗಮನಾದರೇನಂತೆ, ಯಾವುದೂ ಮುಖ್ಯವಲ್ಲ
ನಮ್ಮದೇನು ಹತಾಶೆಯ ಪ್ರಯಾಣವಲ್ಲ
ಬಾ, ನೀ ಸಾವಿರ ಸಲ ಆಣೆ ಮುರಿದರೇನಂತೆ
ಬಾ, ಇನ್ನೊಮ್ಮೆ ಬಾ, ಬಾ,
- ಜಲಾಲ್ ಅದ್-ದಿನ್ ಮಹಮ್ಮದ್ ಬಲ್ಕಿ (ರುಮಿ)
ನಿರ್ಮಲವಾದ ಆ ದಿನ, ಸಮತಟ್ಟಾದ ಭೂಪ್ರದೇಶ, ತಿಳಿ ಹಳದಿ ಬಣ್ಣದ ಗ್ರೇಟ್ ರಿಫ್ಟ್ ವ್ಯಾಲಿಯ ನೆಲ, ಉತ್ತರ ಇಥಿಯೋಪಿಯಾದಲ್ಲಿ. ಸುಮಾರು ಮೂರು ದಿನಗಳಲ್ಲಿ ಕ್ರಮಿಸಬಹುದಾದ ಸುತ್ತಲಿನ 60 ಮೈಲಿ ಕಣ್ಣಿಗೆ ಕಾಣುವಂತಿತ್ತು. ಮೊದಲ ಆಧುನಿಕ ಮಾನವರು ಆಫ್ರಿಕಾದಿಂದ ಚದುರಿದಾಗ ಮೂಡಿ ಮಾಸಿದ ಹೆಜ್ಜೆಗುರುತುಗಳನ್ನು ನನ್ನ ಮುಂದಿನ ಏಳು ವರ್ಷಗಳಲ್ಲಿ ಕಾಲ್ನಡಿಗೆಯಲ್ಲೇ ಪುನರನ್ವೇಷಿಸುತ್ತಾ, ಕ್ರಮಿಸಬಹುದಾದ ದೂರವನ್ನು ನಾನು ಪ್ರತಿನಿಧಿಸುತ್ತಿದ್ದೆ. ಪೂರ್ವಜರ ದೃಷ್ಟಿಕೋನದಲ್ಲೇ, ನನ್ನ ವಿಶ್ವದ ಅನಂತತೆ, ನನ್ನ ದಿಗಂತದ ಮಿತಿ.
ನನ್ನ ಈ ಐತಿಹಾಸಿಕ ಪ್ರಯಾಣದ ಸಾಕ್ಷಿಗಳನ್ನು, ಅನುಭವಗಳನ್ನು ಇಡಿ ಜಗತ್ತಿಗೆ ತಿಳಿಸಲು ಬೇಕಾದ ಕೆಲವು ಪರಿಕರಗಳು ನನ್ನ ಬೆನ್ನಿನ ಚೀಲದಲ್ಲಿ ಇರುವುದು ಅವಶ್ಯಕವೆನಿಸಿದೆ. ನನ್ನ ಅಲೆಮಾರಿ ಪೂರ್ವಜರು ಕನಸು ಮನಸ್ಸಿನಲ್ಲೂ ಏಣಿಸಿರದ, ಇವಿಷ್ಟು ಪರಿಕರಗಳು ನನ್ನ ಜೊತೆ ಇರುವುದು ಅವರಿಗೆ ಮಾಡುತ್ತಿರುವ ಅನಿವಾರ್ಯ ಮೋಸ, ಆದರೆ ಅತ್ಯವಶ್ಯಕ. ನಡೆಯಲೆಂದೆ ರೂಪಿತವಾಗಿರುವ ಮಾನವನಾದ ನಾನು ಗಂಟೆಗೆ 3 ಮೈಲಿ ವೇಗದಲ್ಲಿ ಒಂದು ಸಲಕ್ಕೆ ಒಂದು ಗಜದಂತೆ 2020ನೇ ಇಸವಿಯವರೆಗೂ ಖಂಡಾಂತರಗಳನ್ನು ದಾಟುವುದು ಕಟು ವಾಸ್ತವ. ಈ ಅಭೂತಪೂರ್ವ ಸನ್ನಿವೇಶದಲ್ಲಿ ಈ ಭೂಮಿಯ ಮೇಲೆ ಇರುವುದು ವರವೂ ಅಥವ ಶಾಪವೊ ಎಂದು ತಿಳಿಯಲಾಗದ ಸಂದಿಗ್ಧ ಪರಿಸ್ಥಿತಿ. ನನಗಂತೂ ಇದಕ್ಕಿಂತ ಅತ್ಯುತ್ತಮ ಅವಕಾಶ ಸಿಗಲಾರದು ಎಂದು ಕೊಂಡಿದ್ದೇನೆ. ಈ ನಿಧಾನಗತಿಯ ಪಥಕ್ರಮದಲ್ಲಿ ನಿಂತು ಅವಲೋಕಿಸುತ್ತಿರುವಾಗ ‘ಇದೂಲಿ ಮಹಮ್ಮದ್’ ಎಂಬ ಅಫಾರ್ ಬುಡಕಟ್ಟಿಗೆ ಸೇರಿದ ಕುರಿಗಾಹಿ ತನ್ನ ಟೊಂಕ್ಕಕ್ಕೆ ಕೈಕಟ್ಟಿಯೊ ಅಥವಾ ತಲೆ ಮೇಲೆ ಕೈಯಿಟ್ಟುಕೊಂಡು, ಅಕೇಶಿಯ ಕಡ್ಡಿಯಿಟ್ಟುಕೊಂಡು, ಹಳೆಯ ದಿಕ್ಸೂಚಿ ದೃಷ್ಟಿಸುತ್ತಾ, ನೋಡುವ, ಕೇಳುವ, ಹೇಳುವ ಸಂಗತಿಗಳು ಹಿತವಾಗಿತ್ತು. ಮೊಟ್ಟಮೊದಲ ಹೋಮೋಸೆಪಿಯನ್ ತಂಡ, ಬೇಟೆಗಾರರಿರಬಹುದು, ಸಂಗ್ರಹಕಾರರಿರಬಹುದು, ಈ ಗ್ರಹದ ಬೆರಳೆಣಿಕೆಯಷ್ಟು ಅಂದಿನ ಅಧಿಕೃತ ನಿವಾಸಿಗಳ ಬಗ್ಗೆ, ಸಂಶೋಧಕರು ಹೇಳುವಂತೆ, ಕೆಲವೇ ಸಾವಿರ ಜನರ ಬಗ್ಗೆ ನಾವು ತಿಳಿದಿರುವುದು ಅತ್ಯಲ್ಪ. ಆದರೆ, ಅವರಿಂದ ಬಹುಬೆಲೆಯ ಪಾಠಗಳನ್ನು ಕಲಿಯಬೇಕಾಗಿದೆ. ಏಕೆಂದರೆ ಅವರೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿ ಬದುಕಿದ ನಮ್ಮ ವಾರಸುದಾರ ಪೂರ್ವಜರು. ಇದೆ ‘ಔಟ್ ಆಫ್ ಈಡನ್ ವಾಕ್’ನ ಮೂಲ ಉದ್ದೇಶ.
ಈ ದೂರ ಪ್ರಯಾಣದ ಮಾದರಿಫಲಕ : ಆಫ್ರಿಕಾದಿಂದ ಮೊಟ್ಟಮೊದಲ ಬಾರಿಗೆ ಜಗತ್ತಿನ ಎಲ್ಲೆಡೆ ಚದುರಿದ ಮಾನವಜೀವಿಯ ಬಗ್ಗೆ ವೈಜ್ಞಾನಿಕ ಪರಿಕಲ್ಪನೆ.
ಆಧುನಿಕ ಮಾನವರ ಪಳೆಯುಳಿಕೆಗಳು ಮತ್ತು ಡಿ.ಎನ್.ಎ. ಗುರುತುಗಳನ್ನು ಗಮನಿಸಿದರೆ, ಜನರು ಸುಮಾರು 50,000 ದಿಂದ 70,000 ವರ್ಷಗಳ ಹಿಂದೆಯೇ ಆಫ್ರಿಕಾದ ಗ್ರೇಟ್ ರಿಫ್ಟ್ ವ್ಯಾಲಿಯ ಈಡನ್ನ ಉತ್ತರ ಭಾಗದಿಂದ ಸರಿದಿರುವುದೆಂದು ಭಾಸವಾಗುತ್ತದೆ. ಬಹುಶಃ ಜನಸಂಖ್ಯಾ ಸ್ಪೋಟ ಅಥವಾ ಬದುಕಲು ಉತ್ತಮವಾದ ಹವಾಮಾನದ ಅನ್ವೇಷಣೆಯಲ್ಲಿ ಮೂಲಮಾನವರು, ಅತಿಪ್ರಯಾಸದಿಂದ ಪಶ್ಚಿಮದ ಯುರೋಪ್ಗೆ ನಡೆದಿದ್ದಾರೆ. ಹಾಗೂ ಸಂಘರ್ಷಣೆಯಲ್ಲಿ ನೆಂದರ್ಥಾಲ್ ಮಾನವನ ಅಂತ್ಯವಾಗಿದೆ. ಕೆಲವರು ಯುರೇಷಿಯಾ ಕಡೆಗೆ ಹೆಜ್ಜೆಯಿಟ್ಟಿದ್ದಾರೆ. ಅದೆ ಈಗ ನಮ್ಮ ಪಥಿಸುವ ಕ್ರಮ (ನನ್ನ ಮಂಡಿಗಳ ಆಯಸ್ಸು ಜಾಸ್ತಿ ಇಲ್ಲದಿರುವುದರಿಂದ ಯುರೋಪ್ಅನ್ನು ನಮ್ಮ ಪಥಕ್ರಮದಿಂದ ಕೈಬಿಡಬೇಕಾದ ಅನಿವಾರ್ಯತೆ ಇದೆ. ಇನ್ನು ಓಷಿಯಾನಿಯಾ ಗಣನೆಗೆ ತೆಗೆದುಕೊಳ್ಳುವುದಾದರೆ, ಸರಿಸುಮಾರು 50,000 ಸಾವಿರ ವರ್ಷಗಳ ಹಿಂದೆ ದೋಣಿಗಳ ಮೂಲಕ ಪ್ರಯಾಣಿಸಿದ ಜಾಗಕ್ಕೆ ಹೋಗುವುದು ಈ ಜೀವಮಾನದಲ್ಲೇ ಆಗದಿರುವ ಕೆಲಸ) ನಾನು ಮಧ್ಯಪ್ರಾಚ್ಯದಿಂದ, ಪೂರ್ವಜರು ನಡೆದಿರಬಹುದಾದ ವಲಸೆದಾರಿಯ ಮೂಲಕ ಮಧ್ಯ ಏಷ್ಯಾ ಮತ್ತು ಚೈನಾಗೆ ಚಾರಣ ಮಾಡುವವನಿದ್ದೇನೆ. ನಂತರ, ಸ್ವಲ್ಪ ಉತ್ತರಕ್ಕೆ ತಿರುಗಿ ಆರ್ಕಟಿಕ್ ಸೈಬೀರಿಯಾಗೂ, ಅಲ್ಲಿಂದ ಹಡಗಿನ ಮೂಲಕ ಅಲಾಸ್ಕಾಗೆ ಹೋಗುತ್ತೇನೆ. (ಮೊದಲ ಅಮೇರಿಕನ್ನರು ನೋಡಿದ ಜೀವ ಸಂಪದ್ಭರಿತವಾದ ಅಮೇರಿಕಾದ ಬಗ್ಗೆ ಪುರಾತನ ಶಾಸ್ತ್ರಜ್ಞ ಒಫೆರ್ ಬಾರ್ ಯೋಸೆಫ್ ಹೇಳುವುದು, ಈ ಪ್ರಯಾಣಕ್ಕೆ ‘ಈಡನ್ನತ್ತಾ’ ಎಂದು ಹೆಸರಿಡು ಎಂದು) ಕೊನೆಯದಾಗಿ ಅಮೇರಿಕಾ ಖಂಡದ ಉತ್ತರ ಭಾಗದಿಂದ ಇಳಿಯುತ್ತಾ ದಕ್ಷಿಣ ಅಮೇರಿಕಾದ ಟಿಯೆರ್ರಾ ಡೆಲ್ ಫಿಗೊ ಎಂಬ ಮುಂದುವರಿಯಲು ಸಾಧ್ಯವಾಗದ ಸ್ಥಳಕ್ಕೆ ತಲುಪಿದರೆ ನಮ್ಮ ಖಂಡಾಂತರ ಅನ್ವೇಷಣೆ ಕೊನೆಗೊಳ್ಳುತ್ತದೆ. ಅಲ್ಲಿಗೆ 1830ರಲ್ಲಿ 23 ವರ್ಷದ ಚಾರ್ಲ್ಸ್ ಡಾರ್ವಿನ್ ಹತ್ತಿಸಿದ ಪುನರನ್ವೇಷಣೆಯ ಕಿಡಿ ಆರಬಹುದೆಂದುಕೊಂಡಿದ್ದೇನೆ.
ಆಫ್ರಿಕಾಗೆ ಬರುವ ಕೆಲವು ವಾರಗಳ ಮುನ್ನ ನಾವಾರಿನೂ ಎಂಬ ಚಿಲಿಯ ಟಿಯೆರ್ರಾ ಡೆಲ್ ಫಿಗೊನ ದ್ವೀಪಕ್ಕೆ ತೆರಳಿದ್ದೆ.
ನನ್ನ ಆಯಸ್ಸಿನಲ್ಲಿ ಅತಿಮುಖ್ಯ 7 ವರ್ಷಗಳನ್ನು ಕಳೆಯುವ ಈ ಯೋಜನೆಯ ಅಂತಿಮ ಪ್ರಯಾಣದ ಪೂರ್ವಭಾವಿ ಚಿತ್ರ ಗಮನಿಸಬೇಕಾಗಿತ್ತು. ‘ಯಾಗನ್’ ಭಾಷೆ ಮಾತನಾಡುವ ಒಂದು ಬುಡಕಟ್ಟಿನ ಕೊಟ್ಟಕೊನೆಯ 84 ವರ್ಷ ವಯಸ್ಸಿನ ಕ್ರಿಸ್ಟೀನಾ ಕ್ಯಾಲ್ಡೆರಾನ್ ಎಂಬಾಕೆ ನನ್ನನ್ನು ತನ್ನ ಮನೆಯ ಬಾಗಿಲಲ್ಲಿ ಸ್ವಾಗತಿಸಿದಳು, ಸಾಂಸ್ಕೃತಿಕವಾಗಿ ನಶಿಸುತ್ತಿರುವ ಈ ಸ್ಥಳೀಯ ಬುಡಕಟ್ಟಿನ ಜನ ಬೀಗಲ್ ಚಾನಲ್ನ ಮಂಜುಗಡ್ಡೆಯ ಸಮುದ್ರತೀರಗಳಲ್ಲಿ ಬೆತ್ತಲೆಯಾಗಿ ಮೀನು ಹಿಡಿಯುವುದನ್ನು ಚಾರ್ಲ್ಸ್ ಡಾರ್ವಿನ್ ಬಾಯಿ ಕಳೆದು ನೋಡಿದ್ದ. 7 ವರ್ಷದ ನಂತರ ಈ ಯೋಜನೆ ಕೊನೆಯ ಹಂತದಲ್ಲಿ ಮತ್ತೆ ಸಿಗುವ ಇದೇ ಸ್ಥಳದಲ್ಲಿ ಸಮುದ್ರತೀರದ ಮನೆಯ ಮುಂಭಾಗದಲ್ಲಿ ಕ್ಯಾಲ್ಡೆರಾನ್ಳನ್ನು ಭೇಟಿಯಾಗುವೆನೆಂದು ನಂಬಿದ್ದೇನೆ. ಮತ್ತು ಆಕೆಯ ಮಾತುಗಳನ್ನು ಅನುಭವಗಳನ್ನು ಈ ಜಗತ್ತಿಗೆ ಪಸರಿಸಲು ಉತ್ಸುಕನಾಗಿದ್ದೇನೆ. ಈಕೆಯ ಹಿಂದಿನವರು ಸುಮಾರು 7000 ವರ್ಷಗಳ ಹಿಂದೆ ಯಾರೂ ನೋಡಿರದಂಥ 60 ಮೈಲಿ ಉದ್ದದ ಸಮುದ್ರತೀರವನ್ನು ವೀಕ್ಷಿಸಿದ್ದಾರೆ. ಇದನ್ನೇ ನಾನು ಈಕೆಗೆ ಸ್ಪಾನಿಷ್ ಭಾಷೆಯಲ್ಲಿ ವಿವರಿಸುತ್ತಿದ್ದೆ. ಆಕೆ ಕಿಟಕಿಯ ಪಕ್ಕ ಕುಳಿತುಕೊಂಡು ನೀಲಾಕಾಶವನ್ನು ಆಸಕ್ತಿಯಿಂದ ನೋಡುತ್ತಾ ತನ್ನ ಸುತ್ತಲಿರುವ ವಸ್ತುಗಳು ಮತ್ತು ಪ್ರಾಣಿಗಳ ಕಡೆ ಕಣ್ಣಾಡಿಸುತ್ತಾ ಹೆಚ್ಚೆಂದರೆ ಸಮುದ್ರತೀರಕ್ಕೆ ಅಪ್ಪಳಿಸುವ ಅಲೆಗಳಂತ ಶಬ್ದದ ಆಕೆಯ ನಶಿಸುತ್ತಿರುವ ಭಾಷೆಯಲ್ಲಿ ಏನನ್ನೊ ನೆನಪಿಸಿಕೊಳ್ಳುತ್ತಾ, ನಿರರ್ಗಳವಾಗಿ, ಪರಿಶುದ್ಧತೆಯಿಂದ ಮಾತಾಡುತ್ತಿದ್ದಳು.
